ವೈ.ಮುಹಮ್ಮದ್ ಬ್ಯಾರಿಗೆ ಈ ಬಾರಿಯ ಪ್ರತಿಷ್ಠಿತ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ

Update: 2020-11-23 16:32 GMT

ಮಂಗಳೂರು : ಯುನಿವೆಫ್ ಕರ್ನಾಟಕ ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ "ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ"  ಗೆ ಪ್ರಸಕ್ತ ವರ್ಷ ಎಡಪದವಿನ ಐಡಿಯಲ್ ಸ್ಕೂಲ್ ಇದರ ಅಧ್ಯಕ್ಷ  ವೈ. ಮುಹಮ್ಮದ್ ಬ್ಯಾರಿ ಇವರು ಆಯ್ಕೆಯಾಗಿದ್ದಾರೆ.

ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಇದರ ಅಧ್ಯಕ್ಷರಾಗಿ ಕಳೆದ 10 ವರ್ಷಗಳಿಂದ ಯಾವುದೇ ಸ್ವಾರ್ಥ ಮತ್ತು ಪ್ರತಿಫ಼ಲಾಪೇಕ್ಷೆ ಇಲ್ಲದೆ ಶೈಕ್ಷಣಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದಾರೆ.

ಎಡಪದವಿನ ಪ್ರತಿಷ್ಠಿತ ಮನೆತನದಲ್ಲಿ ಜನಿಸಿದ ವೈ. ಮುಹಮ್ಮದ್ ಬ್ಯಾರಿ ಎಂ.ಕಾಂ. ಸ್ನಾತಕೋತ್ತರ ಪಧವೀಧರ. ಇವರ ಕುಟುಂಬದಲ್ಲಿ ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದವರಿದ್ದು, ಶಿಕ್ಷಣ ಕ್ಷೇತ್ರಕ್ಕೆ ಮತ್ತು ಮುಸ್ಲಿಮ್ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಇದರ ಸಹಾಯಕ ವ್ಯವಸ್ಥಾಪಕರಾಗಿ ದೇಶದ ವಿವಿಧ ಕಡೆ ಸೇವೆ ಸಲ್ಲಿಸಿರುತ್ತಾರೆ.
ಅವರು ಕಳೆದ 20 ವರ್ಷಗಳಿಂದ ದ.ಕ. ಮತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿಯೂ, ಎಡಪದವು ಉಮ್ಮುಹಾತುಲ್ ಮೂಮಿನೀನ್ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರೊಂದಿಗೆ ಬೆರೆಯುವ ಸ್ವಭಾವದ ಮುಹಮ್ಮದ್ ಬ್ಯಾರಿ ಸಮುದಾಯದ ಶೈಕ್ಷಣಿಕ ಏಳಿಗೆಯ ಬಗ್ಗೆ ಕಾಳಜಿಯುಳ್ಳವರಾಗಿದ್ದಾರೆ. ಅರ್ಹವಾಗಿಯೇ ಇವರಿಗೆ ಯುನಿವೆಫ್ ಕರ್ನಾಟಕ 2020 ರ ಸಾಲಿನ "ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ" ಯನ್ನು ನೀಡಿ ಗೌರವಿಸಲು ತೀರ್ಮಾನಿಸಿದೆ. ಪ್ರಶಸ್ತಿಯು 5000 ರೂ. ನಗದು ಹಾಗೂ ಸನ್ಮಾನ ಪತ್ರವನ್ನೊಳಗೊಂಡಿದೆ.

ನವೆಂಬರ್ 27 ರಂದು ಮಗ್ರಿಬ್ ನಮಾಝ್ ಬಳಿಕ ಕಂಕನಾಡಿ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಲಿರುವುದು ಎಂದು ಕಾರ್ಯಕ್ರಮ ಸಂಚಾಲಕ ಸೈಫುದ್ದೀನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News