ಸಶಸ್ತ್ರ ಡ್ರೋನ್‌ಗಳ ರಫ್ತಿನಲ್ಲಿ ಚೀನಾದ ಪ್ರಾಬಲ್ಯ: ಅಮೆರಿಕ ವಿವಿ ಸಂಶೋಧನಾ ವರದಿ

Update: 2020-11-23 16:46 GMT

ಹೊಸದಿಲ್ಲಿ, ನ.23: ಒಂದೊಮ್ಮೆ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶವಾಗಿದ್ದ ಚೀನಾ ಇದೀಗ ವಿಶ್ವದ ಪ್ರಮುಖ ಶಸ್ತ್ರಾಸ್ತ್ರ ಸರಬರಾಜು ದೇಶವೆಂದು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ ಎಂದು ಅಮೆರಿಕದ ಪೆನ್ಸಿಲ್ವೇನಿಯಾ ಮತ್ತು ಟೆಕ್ಸಾಸ್ ಎಆ್ಯಂಡ್‌ಎಂ ವಿವಿಯ ವರದಿ ತಿಳಿಸಿದೆ.

ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ಚೀನಾದಿಂದ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದೆ. 2011ರಿಂದ 2019ರ ಅವಧಿಯಲ್ಲಿ ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಿರುವ 18 ರಾಷ್ಟ್ರಗಳಲ್ಲಿ 11 ದೇಶಗಳು ಚೀನಾದಿಂದ ಖರೀದಿಸಿವೆ ಎಂದು ಚೀನಾದ ಡ್ರೋನ್ ರಫ್ತಿನ ಕುರಿತು ನಡೆಸಿದ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. 2011ಕ್ಕೂ ಮೊದಲು ಕೇವಲ ಮೂರು ದೇಶಗಳು- ಅಮೆರಿಕ, ಬ್ರಿಟನ್ ಮತ್ತು ಇಸ್ರೇಲ್ ಮಾತ್ರ ಸಶಸ್ತ್ರ ಡ್ರೋನ್‌ಗಳನ್ನು ಹೊಂದಿದ್ದವು. ಆದರೆ ಸಶಸ್ತ್ರ ಡ್ರೋನ್ ರಫ್ತಿಗೆ ಮುಂದಾದ ಚೀನಾ ಕ್ಷಿಪ್ರ ಅವಧಿಯಲ್ಲೇ ಪ್ರಮುಖ ಪೂರೈಕೆದಾರನಾಗಿ ಗುರುತಿಸಿಕೊಂಡಿದೆ. 2011ರಲ್ಲೇ ಚೀನಾವು ಡ್ರೋನ್‌ಗಳನ್ನು ಯುಎಇ ಮತ್ತು ಪಾಕಿಸ್ತಾನಕ್ಕೆ ಮಾರಲು ಮಾತುಕತೆ ನಡೆಸಿತ್ತು ಎಂದು ವರದಿ ತಿಳಿಸಿದೆ.

2010ರ ಬಳಿಕ ಸಶಸ್ತ್ರ ಮಾನವರಹಿತ ವೈಮಾನಿಕ ವಾಹನ(ಯುಎವಿ)ಗಳ ರಫ್ತು ಮಾರುಕಟ್ಟೆಯಲ್ಲಿ ಚೀನಾ ಪ್ರಾಬಲ್ಯ ಸಾಧಿಸಿದೆ. ಚೀನಾವನ್ನು ಹೊರತುಪಡಿಸಿ, ಸಶಸ್ತ್ರ ಡ್ರೋನ್ ಹೊಂದಿರುವ 18 ದೇಶಗಳಲ್ಲಿ 11 ದೇಶಗಳು ಚೀನಾದಿಂದ ಖರೀದಿಸಿವೆ. ಇದರಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಉಜ್ಬೇಕಿಸ್ತಾನ ದೇಶಗಳು ಸೇರಿವೆ . ಆದರೆ ಈ ಅವಧಿಯಲ್ಲಿ ಅಮೆರಿಕವು ಫ್ರಾನ್ಸ್‌ಗೆ ಮಾತ್ರ ಸಶಸ್ತ್ರ ಡ್ರೋನ್ ರಫ್ತು ಮಾಡಿದ್ದು ಭಾರತದೊಂದಿಗೆ ವ್ಯವಹಾರಕ್ಕೆ ಮಾತುಕತೆ ನಡೆಸಿದೆ.

 ಚೀನಾವು ಸಶಸ್ತ್ರ ಡ್ರೋನ್‌ಗಳ ರಫ್ತು ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ಈ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಸಶಸ್ತ್ರ ಡ್ರೋನ್ ಹೊಂದಲು ಬಯಸುವ ಪ್ರಜಾಪ್ರಭುತ್ವವಲ್ಲದ ದೇಶಗಳ ಸಂಖ್ಯೆ ಪ್ರಜಾತಂತ್ರ ದೇಶಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News