ಕೊನೆಗೂ ಬೈಡನ್‌ಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿಕೊಂಡ ಟ್ರಂಪ್

Update: 2020-11-24 18:56 GMT

ವಾಶಿಂಗ್ಟನ್, ನ. 24: ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮೇಲೆ ವಿಧಿಸಲಾಗಿದ್ದ ತಡೆಯನ್ನು ನಿವಾರಿಸಲಾಗಿದೆ ಎಂದು ಈ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿರುವ ಅಮೆರಿಕದ ಜನರಲ್ ಸರ್ವಿಸಸ್ ಅಡ್ಮಿನಿಸ್ಟ್ರೇಶನ್ (ಜಿಎಸ್‌ಎ) ಸೋಮವಾರ ಹೇಳಿದೆ.

ಇದರೊಂದಿಗೆ, ನವೆಂಬರ್ 3ರಂದು ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿರುದ್ಧ ಸೋಲನುಭವಿಸಿರುವುದನ್ನು ಒಪ್ಪುವ ಕೊನೆಯ ಹಂತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಿದ್ದಾರೆ ಎಂದು ಅಭಿಪ್ರಾಯಪಡಲಾಗಿದೆ.

‘‘ಏನು ಆಗಬೇಕೋ ಅದನ್ನು ಮಾಡಲು ಜನರಲ್ ಸರ್ವಿಸಸ್ ಅಡ್ಮಿನಿಸ್ಟ್ರೇಶನ್‌ಗೆ ಇದು ಸರಿಯಾದ ಸಮಯವಾಗಿದೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಆದರೆ, ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲು ನಾನೀಗಲೂ ನಿರಾಕರಿಸುತ್ತಿದ್ದೇನೆ ಎಂಬುದಾಗಿ ಅದೇ ಟ್ವೀಟ್‌ನಲ್ಲಿ ಟ್ರಂಪ್ ಹೇಳಿದ್ದಾರೆ. ‘‘ನಮ್ಮ ಹೋರಾಟ ಈಗಲೂ ಬಲಿಷ್ಠವಾಗಿಯೇ ಮುಂದುವರಿದಿದೆ. ನಾವು ಉತ್ತಮ ಹೋರಾಟವನ್ನು ಮುಂದುವರಿಸುತ್ತೇವೆ ಹಾಗೂ ಗೆಲ್ಲುವ ಭರವಸೆ ನನಗಿದೆ’’ ಎಂದು ಅವರು ಹೇಳಿದ್ದಾರೆ.

  ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಅಕ್ರಮ ಎಸಗುವ ಮೂಲಕ ಡೆಮಾಕ್ರಟಿಕ್ ಪಕ್ಷದವರು ಅಧ್ಯಕ್ಷ ಪದವಿಯನ್ನು ನನ್ನಿಂದ ಕದಿಯುತ್ತಿದ್ದಾರೆ ಎಂಬುದಾಗಿ ಟ್ರಂಪ್ ಆರೋಪಿಸಿದ್ದಾರೆ ಹಾಗೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಹಲವು ರಾಜ್ಯಗಳಲ್ಲಿ ಅವರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೆ, ಮೂರು ವಾರಗಳ ಕಾಲ ಪುರಾವೆರಹಿತ ಆರೋಪಗಳನ್ನು ಮಾಡಿದ ಬಳಿಕ, ಚುನಾವಣೆಯಲ್ಲಿ ತಾನು ಸೋತಿರುವುದನ್ನು ಅವರು ಮನಗಂಡಿದ್ದಾರೆ ಎಂದು ಹೇಳಲಾಗಿದೆ.

ಜಿಎಸ್‌ಎಯ ಈ ನಿರ್ಧಾರದೊಂದಿಗೆ ಸರಕಾರದ ನಿಧಿಗಳ ಬಗ್ಗೆ ಮಾಹಿತಿ ಪಡೆಯಲು, ಕಚೇರಿ ಹೊಂದಲು ಮತ್ತು ಕೇಂದ್ರ ಸರಕಾರದ ಅಧಿಕಾರಿಗಳನ್ನು ಭೇಟಿಯಾಗಲು ಬೈಡನ್ ತಂಡಕ್ಕೆ ಸಾಧ್ಯವಾಗಲಿದೆ.

ಬೈಡನ್ ತಂಡದ ಸ್ವಾಗತ

ಶ್ವೇತಭವನ ಪ್ರವೇಶಿಸಲು ಅಗತ್ಯವಾದ ಸರಕಾರಿ ನೆರವನ್ನು ವಿಳಂಬವಾಗಿಯಾದರೂ ನೀಡಲು ಡೊನಾಲ್ಡ್ ಟ್ರಂಪ್ ಆಡಳಿತ ಮುಂದಾಗಿರುವುದನ್ನು ಜೋ ಬೈಡನ್‌ರ ಅಧಿಕಾರ ಹಸ್ತಾಂತರ ತಂಡ ಸೋಮವಾರ ಸ್ವಾಗತಿಸಿದೆ.

‘‘ನಿಯೋಜಿತ ಅಧ್ಯಕ್ಷ ಜೋ ಬೈಡನ್ ಮತ್ತು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಚುನಾವಣೆಯ ಸಂಭಾವ್ಯ ವಿಜೇತರೆನ್ನುವುದನ್ನು ಜಿಎಸ್‌ಎ ಆಡಳಿತಾಧಿಕಾರಿ ಅಂಗೀಕರಿಸಿದ್ದಾರೆ. ಸುಗಮ ಹಾಗೂ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಅಗತ್ಯವಾದ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಹೊಸ ಸರಕಾರಕ್ಕೆ ನೀಡಲು ಅವರು ಮುಂದಾಗಿದ್ದಾರೆ’’ ಎಂದು ಬೈಡನ್ ತಂಡ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News