ವಿಶೇಷ ಶಿಕ್ಷಕರ ಗೌರವ ಧನ ದ್ವಿಗುಣಗೊಳಿಸಲು ಆಗ್ರಹ : ಡಿ.2ರಂದು ಮುಷ್ಕರ, ಡಿ.3ರ ವಿಕಲಚೇತನರ ದಿನಾಚರಣೆ ಬಹಿಷ್ಕಾರ

Update: 2020-11-24 11:55 GMT

ಉಡುಪಿ, ನ.24: ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿ ಸುವಂತೆ ಆಗ್ರಹಿಸಿ ಡಿ.2ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಮುಷ್ಕರ ಧರಣಿ ಹಾಗೂ ಡಿ.3ರ ವಿಶ್ವ ವಿಕಲಚೇತನರ ದಿನಾಚರಣೆ ಯನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷೆ ಡಾ.ಕಾಂತಿ ಹರೀಶ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013- 14ನೆ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಶಿಕ್ಷಕರಿಗೆ 13,500ರೂ. ಮತ್ತು ಇತರ ಸಿಬ್ಬಂದಿಗಳಿಗೆ 8-9,000ರೂ. ಗೌರವಧನವನ್ನು ಈಗ ಶಿಶು ಕೇಂದ್ರಿಕೃತ ಸಹಾಯಧನ ಯೋಜನೆ ಅಡಿಯಲ್ಲಿ ಸುಮಾರು 141 ವಿಶೇಷ ಶಾಲೆಗಳು ಅನುದಾನವನ್ನು ಪಡೆಯುತ್ತಿದ್ದು, ಇಲ್ಲಿ ಸೇವೆ ನೀಡುತ್ತಿರುವ ವರಿಗೆ ಕನಿಷ್ಠ ವೇತನ ಕೂಡ ಸಿಗದಿರುವುದರಿಂದ ಅವರ ಜೀವನ ನಿರ್ವಹಣೆ ದುಸ್ತರ ಎನಿಸಿದೆ ಎಂದು ದೂರಿದರು.

ಗೌರವಧನ ದ್ವಿಗುಣಗೊಳಿಸುವಂತೆ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರಕದೆ ಇದ್ದುದ್ದರಿಂದ, ಸಂಘ ಹಾಗೂ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ನೀಡಿದ ಕರೆಯಂತೆ ಡಿ.3ರಂದು ಸಾರ್ವತ್ರಿಕ ರಜೆ ಆಗಿರುವು ದರಿಂದ ಡಿ.2ರಂದು ರಾಜ್ಯದ ಎಲ್ಲಾ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಛೇರಿ ಅಥವಾ ವಿಕಲಚೇತನರ ಸಬಲೀಕರಣ ಅಧಿಕಾರಿಗಳ ಕಛೇರಿ ಎದುರು ಸಾಂಕೇತಿಕ ಮುಷ್ಕರ ನಡೆಸಲಿದ್ದಾರೆ. ಈ ಬಗ್ಗೆ ಸರಕಾರದಿಂದ ಸಕಾರಾತ್ಮಕ ಆದೇಶ ಜಾರಿಯಾಗದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಡಾ.ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಈಗ ಇಲಾಖೆ ಸಚಿವರಾಗಿರುವ ಹಾಗೂ ಓರ್ವ ವಿಕಲಚೇತನ ಮಗುವಿನ ತಾಯಿಯಾಗಿರುವ ಶಶಿಕಲಾ ಜೊಲ್ಲೆ ಅವರನ್ನು ಸಾಕಷ್ಟು ಬಾರಿ ಭೇಟಿ ಮಾಡಿ ಮನವರಿಕೆ ಮಾಡಿದರೂ ಈವರೆಗೆ ಸರಿಯಾದ ಸ್ಪಂದನೆ ದೊರೆಯದಿರುವುದು ವಿಷಾದನೀಯ. ಅದೇ ರೀತಿ 25 ವರ್ಷ ಮೀರಿದ ವಿಕಲಚೇತನ ವಯಸ್ಕರಿಗೆ ಇಲಾಖೆಯಿಂದ ಯಾವುದೇ ತರಬೇತಿಯಾಗಲಿ, ಪುನರ್ವಸತಿ ಕಾರ್ಯಕ್ರಮ ವಾಗಲಿ ಇಲ್ಲ. ಇದರಿಂದ ಹೆತ್ತವರ ಗೋಳು ಅರಣ್ಯರೋದನ ಆಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಉಡುಪಿ ಜಿಲ್ಲಾ ಕಾರ್ಯದರ್ಶಿ ಜಯ ವಿಜಯ, ದ.ಕ. ಜಿಲ್ಲಾಧ್ಯಕ್ಷೆ ರೇಷ್ಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News