ಮೂಡುಬಿದಿರೆ: ಈಜಲು ನದಿಗಿಳಿದ ಯುವತಿ ಸಹಿತ ನಾಲ್ವರು ನೀರುಪಾಲು

Update: 2020-11-24 16:59 GMT

ಮಂಗಳೂರು, ನ. 24: ಕಡಂದಲೆಯ ಶಾಂಭವಿ ನದಿಯಲ್ಲಿ ಈಜಲು ತೆರಳಿದ ಯುವತಿ ಸಹಿತ ನಾಲ್ವರು ನೀರುಪಾಲಾದ ಧಾರುಣ ಘಟನೆ ಪಾಲಡ್ಕ ಗ್ರಾಪಂ ವ್ಯಾಪ್ತಿಯ ತುಲೆಮುಗೇರ್ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ವಾಮಂಜೂರು ಮೂಡುಶೆಡ್ಡೆ ನಿವಾಸಿಗಳಾದ ನಿಖಿಲ್ (18) ಹಾಗೂ ಹರ್ಷಿತಾ (20), ವೇಣೂರಿನ ಸುಭಾಷ್ (19) ಹಾಗೂ ಬಜ್ಪೆ ಪೆರಾರ ನಿವಾಸಿ ರವಿ (30) ನೀರುಪಾಲಾದವರು. ನದಿಪಾಲಾದವರ ಪೈಕಿ ಹರ್ಷಿತಾ ಹಾಗೂ ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಇಬ್ಬರಿಗಾಗಿ ಶೋಧ ಮುಂದುವರಿದಿದೆ.

ಮೂಡುಬಿದಿರೆ ತಾಲೂಕಿನ ಕಡಂದಲೆ ಗ್ರಾಮದ ಶ್ರೀಧರ ಆಚಾರ್ಯ ಎಂಬವರ ಮನೆಗೆ ವಿವಾಹ ಸಮಾರಂಭಕ್ಕೆಂದು ಓರ್ವ ಯುವತಿ, ಮೂವರು ಯುವಕರ ತಂಡ ಆಗಮಿಸಿತ್ತು. ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಡಂದಲೆಯ ಶಾಂಭವಿ ನದಿಯ ತೀರದಲ್ಲಿ ವಿಹಾರಕ್ಕೆಂದು ತೆರಳಿತ್ತು. ಈ ವೇಳೆ ಯುವತಿ ಸಹಿತ ಯುವಕರು ನದಿಗೆ ಇಳಿದು ಈಜಲು ಮುಂದಾಗಿದ್ದಾರೆ. ನದಿನೀರಿನ ಹರಿಯುವಿಕೆಯ ರಭಸಕ್ಕೆ ಕಾಲುಜಾರಿ ನದಿಪಾಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮನೆಗೆ ಬಂದಿದ್ದವರು ಕಾಣದೇ ಇದ್ದಾಗ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಯವರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯರಲ್ಲಿ ವಿಚಾರಿಸಿದಾಗ ಹುಡುಗರು ಶಾಂಭವಿ ನದಿ ತೀರಕ್ಕೆ ತೆರಳಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಡರಾತ್ರಿವರೆಗೂ ಮುಂದುವರಿದ ಕಾರ್ಯಾಚರಣೆ: ನದಿಪಾಲಾದವರ ರಕ್ಷಣಾ ಕಾರ್ಯಾಚರಣೆಯು ಸಂಜೆಯಿಂದಲೇ ಆರಂಭಗೊಂಡಿತು. ಅಗ್ನಿಶಾಮಕ ದಳ, ಪರಿಣತ ಈಜುಪಟುಗಳು, ಅನುಭವಿ ಮೀನುಗಾರರು ಸಹಿತ ಸ್ಥಳೀಯರ ನೆರವಿನಿಂದ ಈಗಾಗಲೇ ಇಬ್ಬರನ್ನು ಮೃತದೇಹ ಹೊರತೆಗೆಯಲಾಗಿದೆ. ಉಳಿದವರ ರಕ್ಷಣಾ ಕಾರ್ಯ ಮುಂದುವರಿದಿದೆ. ನದಿ ಪ್ರದೇಶದಲ್ಲಿ ಸಂಜೆ ವೇಳೆ ಕತ್ತಲು ಆವರಿಸಿದಾಗ ಬೃಹತ್ ಲೈಟ್ ‌ಗಳನ್ನು ಬಳಸಿಕೊಳ್ಳಲಾಯಿತು. ಲೈಟ್‌ಗಳ ಹೊಂಬೆಳಕಿನಲ್ಲಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಸ್ಥಳಕ್ಕೆ ಗಣ್ಯರ ಭೇಟಿ: ಯುವಕರು ಈಜಲು ನದಿಗಿಳಿದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನದಿ ತೀರದಲ್ಲಿ ಗಣ್ಯರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್‌ಕುಮಾರ್, ಡಿಸಿಪಿ ವಿನಯ್ ಗಾಂವ್ಕರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ, ಮೂಡುಬಿದಿರೆ ಠಾಣಾ ಇನ್‌ಸ್ಪೆಕ್ಟರ್ ದಿನೇಶ್‌ಕುಮಾರ್ ಬಿ.ಎಸ್. ಸಹಿತ ಹಲವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಕುತೂಹಲಿಗರ ದಂಡು: ಶಾಂಭವಿ ನದಿಯಲ್ಲಿ ಈಜಲು ತೆರಳಿದ ನಾಲ್ವರು ಮೃತಪಟ್ಟ ವಿಚಾರ ಸಾರ್ವಜನಿಕರಿಗೆ ತಿಳಿದ ಬೆನ್ನಲ್ಲೇ ಕುತೂಹಲಿಗರ ದಂಡೇ ನದಿ ತೀರದಲ್ಲಿ ನೆರೆದಿತ್ತು. ಸುಮಾರು 400ಕ್ಕೂ ಹೆಚ್ಚು ಜನರು ನದಿತೀರದಲ್ಲಿ ಜಮಾವಣೆಗೊಂಡಿದ್ದರು. ನಿಂತುಕೊಂಡು, ಕುಳಿತು ಕೊಂಡು ರಕ್ಷಣಾ ಕಾರ್ಯ ವೀಕ್ಷಿಸುತ್ತಿದ್ದರು. ಈ ವೇಳೆ ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳನ್ನು ಹಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಘಟನೆ ನಡೆದ ಕೆಲ ಸಮಯದಲ್ಲೇ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News