×
Ad

ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಶಿಕ್ಷಾರ್ಹ: ಡಾ. ವಾಸುದೇವ್

Update: 2020-11-24 19:09 IST

ಉಡುಪಿ, ನ.24: ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಧೂಮಪಾನ ಮಾಡುವ ಚಟ ಹೆಚ್ಚಿರುವುದು ಇತ್ತೀಚಿನ ಸಮೀಕ್ಷೆಯಿಂದ ತಿಳಿದು ಬಂದಿದ್ದು, ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್ ಹೇಳಿದ್ದಾರೆ.

ಉಡುಪಿ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸರ್ವೇಕ್ಷಣಾ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ (ಎನ್‌ಟಿಸಿಪಿ) ಮತ್ತು ಕೋಟ್ಪಾ-2003 ಕಾಯ್ದೆಯ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಶಿಕ್ಷಣ ಸಂಸ್ಥೆಗಳ ಆವರಣದ 100 ಮೀ. ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದನ್ನು ನಿಷೇದಿಸಿದ್ದು, ಶಿಕ್ಷಣ ಸಂಸ್ಥೆಯನ್ನು ತಂಬಾಕು ಮುಕ್ತವನ್ನಾಗಿಸುವ ಜವಾಬ್ದಾರಿಯನ್ನು ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಹೊಂದಿದ್ದಾರೆ. ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003ರ ಸೆಕ್ಷನ್ 4ರಂತೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಅಪರಾಧ. ನಿಯಮ ಉಲ್ಲಂಘನೆಯಾದಲ್ಲಿ 200ರೂ.ವರೆಗೆ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಕಂಡುಬಂದಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ದೂರು ನೀಡಬೇಕು ಎಂದರು.

ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶನ ಮಾಡುವಂತಿಲ್ಲ. ತಂಬಾಕು ಉತ್ಪನ್ನ ಗಳ ಜಾಹಿರಾತು ಗಳನ್ನು ಬೋರ್ಡ್, ಭಿತ್ತಿಪತ್ರ, ಎಲ್‌ಸಿಡಿ ಟಿವಿಗಳ ಮೂಲಕ ಪ್ರಸಾರ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗು ವುದು ಎಂದ ಅವರು ತಿಳಿಸಿದರು.

ಕೆಎಂಸಿಯ ಡಾ.ಮುರಳೀಧರ್ ಕುಲಕರ್ಣಿ ಮಾತನಾಡಿ, ತಂಬಾಕು ನಿಯಂತ್ರಣ ಘಟಕವು ತಂಬಾಕು ನಿಯಂತ್ರಣ ಕುರಿತಂತೆ ಕಾರ್ಯಕ್ರಮ ಗಳನ್ನು ಅನುಷ್ಟಾನಗೊಳಿಸುತ್ತಿದೆ. ತಂಬಾಕಿನಲ್ಲಿ ರಾಸಾಯನಿಕ ವಸ್ತುಗಳಿದ್ದು, ಇದನ್ನು ಸೇವಿಸುವುದರಿಂದ ಕ್ಯಾನ್ಸರ್, ಹೃದಯಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ ಮುಂತಾದ ಮಾರಾಣಾಂತಿಕ ಕಾಯಿಲೆಗಳು ಹರಡುತ್ತವೆ. ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಬರುವ ಕಾಯಿಲೆಗಳಿಂದ ಸಾವನ್ನಪುತಿದ್ದಾರೆ. ಹೀಗಾಗಿ ತಂಬಾಕು ನಿಷೇದದ ಕುರಿತಂತೆ ಸಾರ್ವಜನಿಕರಿಗೆ ತಂಬಾಕು ಸೇವನೆ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ, ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News