ನ.26ರಂದು ‘ಅಗೋಳಿ ಮಂಜಣ್ಣ’ ತ್ರಿಭಾಷಾ ಚಿತ್ರದ ಟೀಸರ್ ಬಿಡುಗಡೆ

Update: 2020-11-24 13:44 GMT

ಉಡುಪಿ, ನ.24: ತುಳುನಾಡಿದ ವೀರ ಪುರುಷ ಎಂದೇ ಹೆಸರಾದ ಅಗೋಳಿ ಮಂಜಣ್ಣ ಕುರಿತ ತುಳು, ಕನ್ನಡ ಮತ್ತು ಮರಾಠಿ ಭಾಷೆಯ ಅದ್ದೂರಿ ಬಜೆಟಿನ ಸೂಪರ್ ಮ್ಯಾನ್ ಆಫ್ ತುಳುನಾಡ್ ಎಂಬ ಟ್ಯಾಗೈನ್‌ನ ‘ಅಗೋಳಿ ಮಂಜಣ್ಣ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವು ನ.26ರಂದು ಸಂಜೆ 6ಗಂಟೆಗೆ ಕಾರ್ಕಳ ಕಟೀಲ್ ಇಂಟರ್ನೇಷನಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ಸಕ್ಸಸ್ ಫಿಲಂಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಸಂಗೀತವಿರುವ ಈ ಚಿತ್ರದಲ್ಲಿ ಕೋಟಿ ಚೆನ್ನಯ್ಯ ಧಾರವಾಹಿ ಖ್ಯಾತಿಯ ರೋಹಿತ್ ಕುಮಾರ್ ಕಟೀಲ್, ಅಗೋಳಿ ಮಂಜಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಸುಧೀರ್ ಅತ್ತಾವರ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದರು.

ಜ.15ರಿಂದ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದ್ದು, ಎಪ್ರಿಲ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಚಿಕ್ಕಮಗಳೂರು ಜ್ಞಾನವಿಜ್ಞಾನ ಮಂದಿರದ ವೇದಬ್ರಹ್ಮ ಕೆ.ಎಸ್.ನಿತ್ಯಾನಂದ ಗುರೂಜಿ ಅನುಗ್ರಹದೊಂದಿಗೆ ಗೋಳಿದಡಿಗುತ್ತು ಗಡಿಕಾರರು ವರ್ಧಮಾನ್ ದುರ್ಗಾಪ್ರಸಾದ್ ಶೆಟ್ಟಿ ಅವರ ಪ್ರೇರಣೆಯಂತೆ ಉದ್ಯಮಿ ಮುನಿಯಾಲು ಉದಯ ಶೆಟ್ಟಿ ಪ್ರೋತ್ಸಾಹ ದೊಂದಿಗೆ ಚಿತ್ರ ನಿರ್ಮಾಣವಾಗುತ್ತಿದೆ ಎಂದರು.

ಮಂಗಳೂರು ಮೂಲ್ಕಿ ಸೀಮೆಯ ಅಧಿಪತಿಯಾಗಿದ್ದ ಅಪ್ರತಿಮ ಸಾಹಸಿ, ಬಲಶಾಲಿ ಅಗೋಳಿ ಮಂಜಣ್ಣ ಸುಮಾರು 200 ವರ್ಷಗಳ ಹಿಂದೆ ಮಂಗಳೂರಿನ ಸುರತ್ಕಲ್ ಸಮೀಪದ ಚೇಳ್ಯಾರ್ ಗುತ್ತಿನಲ್ಲಿ ಬದುಕಿ ಬಾಳಿದ್ದರು ಎಂಬ ಇತಿಹಾಸವಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಾಯಕ ನಟ ರೋಹಿತ್ ಕುಮಾರ್ ಕಟೀಲ್, ತಂತ್ರಜ್ಞ ಡಾ.ಜಯಪ್ರಕಾಶ್ ಮಾವಿನಕುಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News