ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಒತ್ತಾಯ

Update: 2020-11-24 14:03 GMT

ಮಂಗಳೂರು, ನ. 24:  ಧನ್ವಂತರಿ ನಗರ ನಿವಾಸಿ ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಲ್ಲಿ ಒಬ್ಬರಾಗಿದ್ದ ವಿಘ್ನೇಶ್ ನಾಯಕ್ ಹಠಾತ್ತನೆ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಮಾಜಿಕ ವಲಯದಲ್ಲಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಪ್ರಕರಣವನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಹಲವು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆ ಸಂದರ್ಭ ಪ್ರಸಕ್ತ ಶಾಸಕ ವೇದವ್ಯಾಸ ಕಾಮತ್, ನರೇಶ್ ಶೆಣೈ ಜತೆಗೆ ವಿಘ್ನೇಶ್ ನಾಯಕ್ ಹೆಸರೂ ಕೇಳಿ ಬಂದಿತ್ತು. ಹತ್ಯೆಗೆ ಬಳಸಲಾಗಿತ್ತೆನ್ನಲಾದ ಕ್ವಾಲಿಸ್ ಕಾರಿನ ಮಾಲಕ ವಿಘ್ನೇಶ್ ಅವರಾಗಿದ್ದು, ಪ್ರಕರಣದ ಸಂದರ್ಭ ಇವರೆಲ್ಲಾ ತಲೆ ಮರೆಸಿಕೊಂಡಿದ್ದರೆನ್ನಲಾಗಿದೆ. ತನಿಖೆ ಮುಂದುವರಿದು ವಿಘ್ನೇಶ್ ನಾಯಕ್‌ ನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಇದೀಗ ಮುಂದಿನ ತಿಂಗಳು ವಿಘ್ನೇಶ್ ನಾಯಕ್ ವಿವಾಹಕ್ಕೂ ದಿನ ನಿಗದಿಯಾಗಿತ್ತು ಎಂಬ ಮಾಹಿತಿ ಇದೆ. ಇವೆಲ್ಲದರ ನಡುವೆ ವಿಘ್ನೇಶ್ ನಾಯಕ್  ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಸಂಶಯಗಳಿಗೆ ಕಾರಣವಾಗಿರುವುದರಿಂದ  ವ್ಯವಸ್ಥಿತ ಕೊಲೆಯೋ ಅಥವಾ ಪ್ರಚೋದಿತ ಆತ್ಮಹತ್ಯೆಯೋ ಎಂಬ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ದೊರೆಯೇಕಾಗಿದೆ ಎಂದು ಅವರು ಹೇಳಿದರು.

ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಅವರ ಸಹೋದರಿ ರಾಧಾ ಸೇರಿದಂತೆ ಸಾಕ್ಷಿಗಳಿಗೆ ಪೊಲೀಸ್ ಭದ್ರತೆಯನ್ನು ಒದಗಿಸಬೇಕು. ನರೇಶ್ ಶೆಣೈ ಹಾಗೂ ವಿಘ್ನೇಶ್ ನಾಯಕ್ ಅವರ ಒಂದು ತಿಂಗಳ ಕಾಲ್ ಡಿಟೇಲ್ ಮೇಲೆ ತನಿಖೆ ನಡೆಸಬೇಕು ಹಾಗೂ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು. ವಿಘ್ನೇಶ್ ಆತ್ಮಹತ್ಯೆ ಪ್ರಕರಣಕ್ಕೂ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬ ದಿಕ್ಕಿನಲ್ಲಿ ನ್ಯಾಯಬದ್ಧ ತನಿಖೆ ನಡೆಯಬೇಕು. ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಶಾಸಕರು ಹಾಗೂ ಅವರ ಸಹಪಾಠಿಗಳ ಯಾವುದೇ ಪಾತ್ರವಿಲ್ಲ ವಾದಲ್ಲಿ ಅವರು ಆರೋಪ ಮುಕ್ತರಾಗಬೇಕೆಂಬುದು ನಮ್ಮ ಆಸೆ ಎಂದು ಮಿಥುನ್ ರೈ ಹೇಳಿದರು.

ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಶಾಸಕರ ಮೇಲೆ ಯಾವುದೇ ರೀತಿಯ ಸಂಶಯ ಇರಬಾರದು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಗೊಂದಲದಿಂದ ಮುಕ್ತವಾಗಿ, ತಪ್ಪಿತಸ್ಥರಿಗೆ ಕಾನೂನುಬದ್ಧ ಶಿಕ್ಷೆ ಆಗಬೇಕೆಂಬುದು ನಮ್ಮ ಆಗ್ರಹ. ಇದಕ್ಕಾಗಿ ತನಿಖೆಯಲ್ಲಿ ವಿಳಂಬವಾಗಬಾರದು. ಕೇಂದ್ರ ಅಥವಾ ರಾಜ್ಯದ ತನಿಖಾ ತಂಡದಿಂದ ತನಿಖೆ ನಡೆಯಬೇಕು ಎಂದರು.

ಗೋಷ್ಠಿಯಲ್ಲಿ ವಿಶ್ವಾಸ್ ಕುಮಾರ್ ದಾಸ್, ನವೀನ್ ಡಿಸೋಜಾ ಉಪಸ್ಥಿತರಿದ್ದರು.

ಸಾವಿನಲ್ಲಿ ರಾಜಕೀಯವನ್ನು ಕಾಂಗ್ರೆಸ್ ಮಾಡದು

ವಿಘ್ನೇಶ್ ಅವರ ಕುಟುಂಬದವರನ್ನು ಭೇಟಿಯಾಗಲಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಿಥುನ್ ರೈ, ಸಾವಿನ ಸಂದರ್ಭದಲ್ಲಿ ಅಂತಹ ನೀಚ ರಾಜಕೀಯ ಮಾಡುವ ಪಕ್ಷ ಕಾಂಗ್ರೆಸ್ ಅಲ್ಲ. ಪೊಲೀಸ್ ಆಯುಕ್ತರ ಮೇಲೆ ಅಪಾರವಾದ ನಂಬಿಕೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News