ಸಾಕಣೆಗೆ ದನಗಳನ್ನು ಕೊಂಡ್ಯೊಯ್ಯಲು ಅಡ್ಡಿಪಡಿಸುತ್ತಿರುವ ಬಜರಂಗದಳ : ಕೃಷ್ಣ ಭಟ್ ಆರೋಪ

Update: 2020-11-24 14:08 GMT
ಸಾಂದರ್ಭಿಕ ಚಿತ್ರ

ಪುತ್ತೂರು : ಹೈನುಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ದ.ಕ. ಜಿಲ್ಲೆಯಲ್ಲಿ ಸಾಕಣೆ ಮಾಡಲೆಂದು ದನ ಸಾಗಾಟ ನಡೆಸಲೂ ಬಜರಂಗದಳ  ಸಂಘಟನೆ ತೊಂದರೆ ಮಾಡುತ್ತಿದೆ. ಪಶು ಸಂಗೋಪನಾ ಇಲಾಖೆಯಿಂದ ಅನುಮತಿ ಪಡೆದುಕೊಂಡು ಸಾಕಲೆಂದು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಒಯ್ಯುವ ಹಂತದಲ್ಲಿ ದನ ಸಾಗಾಟ ತಡೆದು ಅನ್ಯಾಯ ಮಾಡುತ್ತಿದೆ ಎಂದು ಮೊಟ್ಟೆತ್ತಡ್ಕ ಕೃಷ್ಣ ಭಟ್ ಆರೋಪಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ  ಮಾತನಾಡಿ, ಕುಕ್ಕುಜೆ ಕೃಷ್ಣ ಭಟ್ ಅವರಿಂದ ಸಾಕಣೆಕೆಗೆಂದು ಎರಡು ಗಬ್ಬದ ದನಗಳನ್ನು ಮುಹಮ್ಮದ್ ಏತಡ್ಕ ಎಂಬವರು ನ.16ರಂದು ಖರೀದಿ ಮಾಡಿದ್ದು, ಅದರ ಮಧ್ಯವರ್ತಿಯಾದ ತಾನು ಪಶುಸಂಗೋಪನಾ ಇಲಾಖೆಯಿಂದ ಅನುಮತಿ ಪಡೆದು ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುತ್ತಿದ್ದ ಸಂದರ್ಭ ಪುತ್ತೂರಿನ ಕೈಕಾರ ಎಂಬಲ್ಲಿ ಬಜರಂಗದಳದ ಸುಮಾರು 40 ಮಂದಿಯ ತಂಡ ತಡೆದು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ವೀಡಿಯೊ ಚಿತ್ರೀಕರಣ ನಡೆಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮಾನಹಾನಿ ಹಾಗೂ ಅಪಮಾನ ಮಾಡಿದ್ದಾರೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಅನ್ಯಾಯ ಆಗಿದ್ದು, ತಲೆ ಎತ್ತಿ ತಿರುಗಾಡಲಾರದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೇಳಿದರು.

ಅಕ್ರಮವಾಗಿ ದನ ಸಾಗಾಟ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ನಮ್ಮ ಮೇಲೆ ಹಾಕಿದ್ದಲ್ಲದೆ, ನಾವು ಜೀವ ಮಾನದಲ್ಲಿ ಕೇಳದ ಕೆಟ್ಟ ಮಾತುಗಳಿಂದ ನಿಂದನೆ ಮಾಡಿದ್ದಾರೆ. ನಂತರ ಸಂಪ್ಯ ಪೊಲೀಸರು ಬಂದು ಠಾಣೆಗೆ ತನ್ನನ್ನು ಮತ್ತು ಚಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪೊಲೀಸ್ ಅಧಿಕಾರಿಗಳ ಪಶುಸಂಗೋಪನಾ ಇಲಾಖೆಯಿಂದ ನೀಡಿದ ಅನುಮತಿ ಪತ್ರ ಪರಿಶೀಲಿಸಿ ದನ ವನ್ನು ಮತ್ತೆ ಕುಕ್ಕುಜೆ ಕೃಷ್ಣ ಭಟ್ ಮನೆಗೆ ಒಯ್ಯುವಂತೆ ತಿಳಿಸಿದ್ದಾರೆ. ನಾವು ಅದರಂತೆ ನಡೆದುಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ದನ ಸಾಗಾಟ ಮಾಡುತ್ತಿದ್ದ ಪಿಕಪ್ ಚಾಲಕ ಆದಂ ಮೊಟ್ಟೆತ್ತಡ್ಕ ಅವರು ಮಾತನಾಡಿ ನಾನು ಕಳೆದ ಹಲವಾರು ವರ್ಷಗಳಿಂದ ಪಿಕಪ್ ಚಾಲಕನಾಗಿ ವೃತ್ತಿ ಮಾಡುತ್ತಿದ್ದೇನೆ. ನನ್ನ ಪಿಕಪ್‍ಗೆ ಸೌಹಾರ್ದ ಎಂಬ ಹೆಸರಿದ್ದು, ಅಂತಹ ಸುಮಾರು 10ಕ್ಕೂ ಅಧಿಕ ಪಿಕಪ್ ಪುತ್ತೂರಿನಲ್ಲಿದೆ. ಆದರೆ ಯಾವುದೋ ಸೌಹಾರ್ದ ಎಂಬ ಹೆಸರಿನ ಪಿಕಪ್‍ನಲ್ಲಿ ಈ ಹಿಂದೆ ಅಕ್ರಮ ಜಾನುವಾರು ಸಾಗಾಟ ನಡೆದಿತ್ತು ಎಂದು ಹೇಳಿಕೊಂಡು ನನ್ನ ಪಿಕಪ್ ತಡೆದು ತೊಂದರೆ ನೀಡಿದ್ದಾರೆ. ನಾನು ಈ ತನಕ ಯಾವುದೇ ಅಕ್ರಮ ವ್ಯವಹಾರ ನಡೆಸಿಲ್ಲ, ಕೃಷ್ಣ ಭಟ್ ಅವರು ದನ ಸಾಗಾಟ ಮಾಡಲು ಬಾಡಿಗೆ ಗೊತ್ತುಪಡಿಸಿದಾಗ ಅವರಲ್ಲಿಯೂ ಪರವಾನಿಗೆ ಇದ್ದರೆ ಮಾತ್ರ ಸಾಗಿಸುತ್ತೇನೆ ಎಂದಿದ್ದೆ. ಆದರೆ ನಾವು ದನ ಸಾಗಾಟ ಪರವಾನಿಗೆ ತೋರಿಸಿದರೂ ಅವರು ನಮ್ಮನ್ನು ತಡೆದು ಅವ್ಯಾಚ್ಯವಾಗಿ ನಿಂದಿಸಿ ಅವಮಾನಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡವನು. ನನ್ನ ಕುಟುಂಬ ಸಾಕಲು ಪಿಕಪ್ ವಾಹನ ಬಿಟ್ಟರೆ ಬೇರೆ ದಾರಿಯಿಲ್ಲ. ಹೀಗಾದರೆ ನಾವು ಕುಟುಂಬ ಸಾಕುವುದು ಹೇಗೆ. ಅಕ್ರಮ ದನ ಸಾಗಾಟಕ್ಕೆ ಕಡಿವಾಣ ಹಾಕಲಿ. ಆದರೆ ಇಲಾಖೆಯ ಅನುಮತಿ ಪಡೆದುಕೊಂಡು ಸಾಗಾಟ ಮಾಡುವಾಗ ಯಾವುದೇ ಸಂಘಟನೆಗಳು ತೊಂದರೆ ಮಾಡಬಾರದು. ಇದರಿಂದ ನಮ್ಮ ಬದುಕು ಸಾಗಿಸಲು ಕಷ್ಟವಾಗುತ್ತದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News