ಕೊರೋನೋತ್ತರ ಶಾಲಾ ಪ್ರಾರಂಭ; ಸರಕಾರದ ನಿರ್ಧಾರಕ್ಕೆ ತೀವ್ರ ಖಂಡನೆ

Update: 2020-11-24 15:12 GMT

ಕುಂದಾಪುರ, ನ. 24: ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳುಗಳಿಂದ ಮುಚ್ಚಿರುವ ಶಾಲೆಗಳನ್ನು ಪುನರಾರಂಭಿಸುವ ವಿಚಾರದಲ್ಲಿ ಸರಕಾರ ನಿನ್ನೆ ತೆಗೆದುಕೊಂಡ ತೀರ್ಮಾನವನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ಒಂದರಿಂದ 8ನೇ ತರಗತಿಯವರೆಗೆ ಈ ವರ್ಷ ಶಾಲೆಗಳನ್ನು ತೆರೆಯದಿರುವ ಸರಕಾರದ ನಿರ್ಧಾರ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಹಾಗೂ ಮಕ್ಕಳ ವಿರೋಧಿ ನಿರ್ಧಾರವಾಗಿದೆ ಎಂದು ಜಿಲ್ಲಾ ಘಟಕ ಹೇಳಿಕೆಯಲ್ಲಿ ತಿಳಿಸಿದೆ.

‘ಸರಕಾರದ ಈ ನಿರ್ಧಾರ ತುಂಬಾ ದುರದೃಷ್ಟಕರ. ಸ್ಪಷ್ಟವಾಗಿ ಇದು ಬಡ ಮತ್ತು ಹಿಂದುಳಿದ ಸಮುದಾಯಗಳು ಮತ್ತು ಅವರ ಮಕ್ಕಳ ಹಿತಾಸಕ್ತಿ ಹಾಗೂ ಬೆಳವಣಿಗೆಗೆ ವಿರುದ್ಧದ ನಿರ್ಧಾರವಾಗಿದೆ. ಜೊತೆಗೆ ಮುಖ್ಯಮಂತ್ರಿಗಳು ಸಂಬಂಧಪಟ್ಟ ಶಿಕ್ಷಣ ಸಚಿವರನ್ನು ಮೂಲೆಗುಂಪು ಮಾಡುವ ಮೂಲಕ ಎಲ್ಲಾ ನಿರ್ಧಾರಗಳನ್ನು ಅವರೇ ಏಕೆ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಇದರ ಹಿಂದಿರುವ ಒತ್ತಡ ಯಾವುದು ಎಂಬುದು ದೊಡ್ಡ ರಹಸ್ಯವಾಗಿದೆ ಎಂದು ಹೇಳಿಕೆ ಪ್ರಶ್ನಿಸಿದೆ.

ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ರಕ್ಷಿಸುವ ಪ್ರಾಥಮಿಕ ಬಾಧ್ಯತೆ ಯನ್ನು ಹೊಂದಿರುವ ರಾಜ್ಯ ಸರಕಾರವೇ ‘ಮಕ್ಕಳ ಹಿತಾಸಕ್ತಿಗೆ’ ವಿರುದ್ಧವಾದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಜೀತ ಪದ್ಧತಿ ಮತ್ತು ಮಕ್ಕಳ ಸಾಗಾಣಿಕೆಗೆ ಉತ್ತೇಜನ ನೀಡುವ ನೀತಿ ಅನುಸರಿ ಸಲು ಹೊರಟಿರುವುದು ಖಂಡನೀಯ.

ಇದು ಸಂವಿಧಾನದಲ್ಲಿ ಬದುಕುವ ಹಾಗು ಶಿಕ್ಷಣದ ಮೂಲಭೂತ ಹಕ್ಕಿನ (ಪರಿಚ್ಛೇಧ 21, 21 ಎ ಮತ್ತು 24 ಹಾಗು ರಾಜ್ಯ ನಿರ್ದೇಶಕ ತತ್ವಗಳಾದ 39,41,45,46 ಮತ್ತು 47) ಮತ್ತು ಮಕ್ಕಳ ಹಕ್ಕುಗಳ ಒಡಂಬಡಿಕೆಯ (ಯುಎನ್‌ಸಿಆರ್ಸಿ) ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿಕೆ ತಿಳಿಸಿದೆ. 

ರಾಜ್ಯ ಸರಕಾರದ ಈ ನಿರ್ಧಾರ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಸ್ಪಷ್ಟ ಉದಾಹರಣೆಯಾಗಿದೆ. ಸರಕಾರಿ ಶಾಲಾ ಮಕ್ಕಳಿಗೆ ಆನ್‌ ಲೈನ್ ಶಿಕ್ಷಣಕ್ಕೆ ಪೂರಕವಾದ ತಂತ್ರಜ್ಞಾನ ಮತ್ತು ಸೌಲಭ್ಯಗಳು ಇಲ್ಲದ ಕಾರಣ ಸರಕಾರ, ಶಿಕ್ಷಣ ಸಚಿವರು, ಶಿಕ್ಷಣ ತಜ್ಞರುಗಳ ಶಿಫಾರಸಿನ ಮೇರೆಗೆ ಶಿಕ್ಷಣ ಇಲಾಖೆ ವಿದ್ಯಾಗಮ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸರಕಾರಿ ಶಾಲೆಗಳಲ್ಲಿರುವ ಮಕ್ಕಳು ಕೂಡ ಕಲಿಕೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು.

ಇದರಲ್ಲಿ ಶಿಕ್ಷಣ ಸಚಿವರ ಶ್ರಮ ಅಪಾರ ಮತ್ತು ಅಭಿನಂದನೀಯ. ವಿದ್ಯಾಗಮದಿಂದ ಸರಕಾರಿ ಶಾಲೆಯ ಮಕ್ಕಳಿಗೆ ಕೋರೋನ ಕಾಲದಲ್ಲಿಯೂ ಗುಣಮಟ್ಟದ ಶಿಕ್ಷಣ ದೊರಕುವಲ್ಲಿ ಸರಕಾರದ ಪ್ರಯತ್ನ ಸಫಲವಾಗಿದೆ. ಸರಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕೂಡ ಹೆಚ್ಚಾಗಿದ್ದು ಅಂಕಿ ಅಂಶಗಳಿಂದ ತಿಳಿದುಬರುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸರಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿದು ಪುನರ್ವಿಮರ್ಶೆ ಮಾಡಿ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಕೊಡಲು ಈ ಹಿಂದೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ವಿದ್ಯಾಗಮ ವನ್ನು ಪ್ರಾರಂಭ ಮಾಡುವುದರೊಂದಿಗೆ ಆದಷ್ಟು ಬೇಗ ಶಾಲೆಗಳನ್ನು ತೆರೆಯುವ ಬಗ್ಗೆ ಆದೇಶವನ್ನು ಕೊಡಬೇಕು. ಇಲ್ಲದಿದ್ದರೆ ಸಮನ್ವಯ ವೇದಿಕೆಯು ಪೋಷಕರೊಂದಿಗೆ ಸೇರಿ ಹೋರಾಟ ಮಾಡಲಿದ್ದೇವೆ ಎಂದು ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಉಡುಪಿ ಘಟಕದ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ.ನಾಗರಾಜ್, ಕುಂದಾಪುರ ವಲಯ ಅಧ್ಯಕ್ಷ ಅವನೀಶ ಹೊಳ್ಳ, ತಾಲೂಕು ಕಾರ್ಯದರ್ಶಿ ಜ್ಯೋತಿ ಶೆಟ್ಟಿ, ಗುಲ್ವಾಡಿ ಪಂಚಾಯತ್ ಘಟಕದ ಅಧ್ಯಕ್ಷ ಸಾದಿಕ್ ಮಾವಿನಕಟ್ಟೆ, ಶಿರೂರು ಪಂಚಾಯತ್ ಘಟಕದ ಅಧ್ಯಕ್ಷ ಹರೀಶ್ ಕೆ. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News