ಕರಾವಳಿ: 5 ವರ್ಷಗಳಲ್ಲಿ 1338 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಾಸ್ಟರ್ ‌ಪ್ಲಾನ್

Update: 2020-11-24 15:16 GMT

ಕಾಪು, ನ.24: ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳ ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ಟ್ಟು 3986.25 ಕೋಟಿ ರೂ.ವೆಚ್ಚದಲ್ಲಿ ಒಟ್ಟು 1338 ಕಿಂಡಿ ಅಣೆಕಟ್ಟನ್ನು ನಿರ್ಮಿಸಲು ಮಾಸ್ಟರ್ ಪ್ಲಾನ್‌ನ್ನು ಸಿದ್ಧಪಡಿಸಲಾ ಗಿದೆ ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಕಾಪುವಿನ ಮುಳೂರಿನ ಬಿಜೆಪಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಇವುಗಳಲ್ಲಿ 446 ಕಿಂಡಿ ಅಣೆಕಟ್ಟುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, 426 ಉಡುಪಿ ಜಿಲ್ಲೆ ಹಾಗೂ 466 ಕಿಂಡಿ ಅಣೆಕಟ್ಟುಗಳನ್ನು ಉತ್ತರ ಕನ್ನಡ ಜಿಲೆಯಲ್ಲಿ ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ಇವುಗಳನ್ನು ಸಣ್ಣ ನೀರಾವರಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದವರು ನುಡಿದರು.

ಇಂದು ಮಂಗಳೂರಿನ ಹರೇಕಳದಲ್ಲಿ ನಿರ್ಮಾಣಗೊಳ್ಳುತ್ತಿರುವ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣ ಕಾಮಗಾರಿ ಯನ್ನು ವೀಕ್ಷಿಸಿದ್ದು, ಬೈಂದೂರು ತಾಲೂಕು ಪಡುವರಿ ಗ್ರಾಮದ ಸುಬ್ಬಾರಾಡಿಯಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಉಪ್ಪು ನೀರು ತಡೆ ಅಣೆಕಟ್ಟಿಗೆ ಶಿಲಾನ್ಯಾಸ ನೆರವೇರಿಸುವುದಾಗಿ ತಿಳಿಸಿದರು.

ಇನ್ನು ಉಡುಪಿ ತಾಲೂಕಿನಲ್ಲಿ ತಲಾ 35 ಕೋಟಿ ರೂ.ವೆಚ್ಚದಲ್ಲಿ ಎರಡು ಕಿಂಡಿ ಅಣೆಕಟ್ಟಿಗೆ ಕ್ಯಾಬಿನೆಟ್ ಮಂಜೂರಾತಿ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಒಂದೆರಡು ಕೋಟಿ ರೂ.ವೆಚ್ಚದಲ್ಲಿ ಕಿಂಡಿ ಅಣೆಕಟ್ಟುಗಳನ್ನು ಕಟ್ಟುವು ದರಿಂದ ರೈತರ ನೀರಿನ ಸಮಸ್ಯೆ ಬಗೆಹರಿಯುವುದಲ್ಲದೇ ಹಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಯುತ್ತದೆ. ಹೀಗಾಗಿ ನಾವು ಇದಕ್ಕೆ ಆದ್ಯತೆ ನೀಡಲು ಬಯಸಿದ್ದೇವೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದರ ಮೂಲಕ ಬಹಳ ಬೇಡಿಕೆ ಇರುವ ಸಿಹಿನೀರಿನ ಸಿಗಡಿ ಬೆಳೆ ಬೆಳೆಯಲು ಸಾದ್ಯವಾಗಲಿದೆ ಎಂದ ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇದಕ್ಕಾಗಿ ಈಗಾಗಲೇ 1079 ಜಾಗಗಳನ್ನು ಗುರುತಿಸಲಾಗಿದೆ ಎಂದರು.

ಹಲಗೆ ಬದಲಾವಣೆಗೆ 4 ಕೋಟಿ ರೂ.:  ಜಿಲ್ಲೆಯಲ್ಲಿ ಈಗಾಗಲೇ ಇರುವ ಕಿಂಡಿ ಅಣೆಕಟ್ಟಿನ ನಿರ್ವಹಣೆ ಕುರಿತಂತೆ ಜನರಲ್ಲಿರುವ ಅಸಮಧಾನದ ಬಗ್ಗೆ ಸಚಿವರ ಗಮನ ಸೆಳೆದಾಗ, ಇಲ್ಲಿ ಸಮಸ್ಯೆ ಇರುವುದು ಈಗಾಗಲೇ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಿರುವ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯಲ್ಲಿ ಸಮಸ್ಯೆ, ವಿವಾದವಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯಿಂದ ನಿರ್ವಹಿಸುವ ಕಿಂಡಿ ಅಣೆಕಟ್ಟುಗಳಲ್ಲಿರುವ ಹಲಗೆಗಳ ದುರಸ್ತಿ ಹಾಗೂ ಬದಲಾವಣೆಗೆ ಈಗಾಗಲೇ ನಾಲ್ಕು ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈಗ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿ 347 ಕಿಂಡಿ ಅಣೆಕಟ್ಟುಗಳಿವೆ ಎಂದರು.

ಈ ಬಾರಿ ನಮ್ಮ ಸುಪರ್ದಿಯಲ್ಲಿರುವ ಎಲ್ಲಾ ಅಣೆಕಟ್ಟುಗಳ ಹಲಗೆಗಳನ್ನು ಹಾಕಿ ನೀರಿನ ಹರಿವನ್ನು ನಿಲ್ಲಿಸಲಾಗಿದೆ ಎಂದು ಜಿಲ್ಲಾ ಇಲಾಖಾ ಅಧಿಕಾರಿ ಗಳಿಂದ ಮಾಹಿತಿ ಪಡೆದು ಸಚಿವರು ತಿಳಿಸಿದರು.

ಪರಿಹಾರಕ್ಕೆ ಪ್ರಯತ್ನ: ಕೋಟ, ಮಟ್ಟು ಮುಂತಾದ ಕಡೆಗಳಲ್ಲಿ ನದಿಗಳ ಉಪ್ಪು ನೀರು ಗದ್ದೆಗಳಿಗೆ ಹರಿದು ಅಲ್ಲಿ ಬೆಳೆದ ಬೆಳೆಗಳೆಲ್ಲಾ ನಾಶವಾಗಿದ್ದು, ಅವುಗಳಿಗೆ ಪರಿಹಾರ ನೀಡುವಂತೆ ರೈತರು ಮನವಿ ಮಾಡಿರುವ ಬಗ್ಗೆ ಅವರ ಗಮನ ಸೆಳೆದಾಗ, ಇವುಗಳ ಬಗ್ಗೆ ಪರಿಶೀಲಿಸ ಲಾಗುವುದು ಎಂದರು.

ಮೇಲ್ಮನವಿ ಸಲ್ಲಿಕೆ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆ ನೀಡಿರುವ ಕುರಿತು ಕಾನೂನು ಸಚಿವರನ್ನು ಪ್ರಶ್ನಿಸಿದಾಗ, ರಾಜ್ಯ ಸರಕಾರ ಈಗಾಗಲೇ ಮೇಲ್ಮನವಿ ಸಲ್ಲಿಸಿದೆ ಎಂದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ರಾಜ್ಯ ಸಣ್ಯ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News