ಪತ್ರಕರ್ತರು ತನಿಖಾ ವರದಿಗೆ ಆದ್ಯತೆ ನೀಡಲಿ: ರಾಷ್ಟ್ರೀಯ ಪತ್ರಿಕಾ ದಿನಾಚಣೆಯಲ್ಲಿ ಡಿಸಿ ರಾಜೇಂದ್ರ ಸಲಹೆ

Update: 2020-11-24 15:21 GMT

ಮಂಗಳೂರು, ನ.24: ಪತ್ರಿಕಾರಂಗದಲ್ಲಿ ‘ಕಟ್ ಆಂಡ್ ಪೇಸ್ಟ್ ಜರ್ನಲಿಸಂ’ ಸರಿಯಲ್ಲ. ತನಿಖಾ ಪತ್ರಿಕೋದ್ಯಮ, ವಸ್ತುನಿಷ್ಠ ವರದಿಯನ್ನು ಮಾಡುವುದು ಬಹಳ ಮುಖ್ಯ. ಮಂದಿನ ಸವಾಲಿನ ದಿನಗಳಲ್ಲಿ ವಸ್ತುನಿಷ್ಠ ವರದಿಯು ಬಹಳ ಮುಖ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿಯಿಂದ ರಾಣಿ ಅಬ್ಬಕ್ಕ ನೌಕೆಯಲ್ಲಿ ನಡೆದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಗಳೂರಿನ ಕಡಲ ತೀರದ, ನದಿ ತೀರದ ಪ್ರವಾಸೋದ್ಯಮ ಅಭಿವೃದ್ಧಿ ಗೆ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್, ಪತ್ರಕರ್ತರು ಎಂದರೆ ಸತ್ಯವನ್ನು ಸಮಾಜಕ್ಕೆ ತೋರಿಸುವವರು. ಸಮಾಜದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸುವಂತಹವರು. ಕೆಲವೊಂದು ಗೊತ್ತಿಲ್ಲದೆ ತಪ್ಪುಗಳಾದ ಸಂದರ್ಭ ದಲ್ಲಿ ಎಚ್ಚರಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು.

ಮಂಗಳೂರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಯೋಜನೆಯನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಹಿರಿಯ ಪತ್ರಕರ್ತರಾದ ರಿಚರ್ಡ್ ಲಸ್ರಾದೋ, ಜನಾರ್ದನ ಎಸ್. ಪುರಿಯ, ಆರ್.ಎನ್. ಪೂವಣಿ ಉಜಿರೆ, ರಾಜಾ ಬಂಟ್ವಾಳ್, ಹಮೀದ್ ವಿಟ್ಲ, ಜಯಪ್ರಕಾಶ್ ಕುಕ್ಕೇಟಿ, ಯು.ಎಲ್. ಉದಯಕುಮಾರ್ ಮತ್ತು ಲಕ್ಷಣ್ ಕುಂದರ್ ಅವರನ್ನು ಜಿಲ್ಲಾಧಿಕಾರಿ, ಶಾಸಕರು ಸಹಿತ ಅತಿಥಿಗಳು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್, ಸಮಿತಿಯು ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ರಾಜ್ಯ ಅಧ್ಯಕ್ಷ ಬಿ. ನಾರಾಯಣ, ಕೆಜೆಯು ಬೆಂಗಳೂರು ಗೌರವಾಧ್ಯಕ್ಷ ಕೆ.ವಿ. ರಾಜೇಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ್, ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಉಪಾಧ್ಯಕ್ಷ ಈ.ಟಿ. ಕೇರ್ ರಾಜು, ಕೆಜೆಯು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಯಕುಮಾರ್ ಕೆ., ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮಿತಿಯ ಕೋಶಾಧಿಕಾರಿ ಜ್ಯೋತಿ ಪ್ರಕಾಶ್ ಪುಣಚ, ಜೊತೆ ಕಾರ್ಯದರ್ಶಿ ಈಶ್ವರ ವಾರಣಾಸಿ, ಉಪಾಧ್ಯಕ್ಷ ಗಿರಿಧರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ, ಗೌತಮ್ ಶೆಟ್ಟಿ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೆಜೆಯು ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು. ಕೆನ್ಯೂಟ್ ಪಿಂಟೋ ಸನ್ಮಾನಿತರ ಪರಿಚಯಿಸಿದರು. ಜ್ಯೋತಿ ಪ್ರಕಾಶ್ ಪುಣಚ ವಂದಿಸಿರು.

ಗೋಷ್ಠಿ: ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರೊ.ಡಾ. ಚಂದ್ರ ಪೂಜಾರಿ ಅವರಿಂದ ‘ಅಭಿವ್ಯಕ್ತಿ -ತತ್ವ ಮತ್ತು ಆಚರಣೆ’ ಎನ್ನುವ ವಿಚಾರದ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು. ಈ ಮೂಲಕ ಅಬ್ಬಕ್ಕ ಕ್ವೀನ್ ಕ್ರೂಸ್ ಮೂಲಕ ಮಂಗಳೂರಿನ ಬೊಕ್ಕಪಟ್ಣದಿಂದ ಆರಂಭಿಸಿ ನದಿ-ಕಡಲ ನೀರ ನಡುವಿನ ವಿಹಂಗಮ ವಿಹಾರದ ಜೊತೆಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯು ಸಂಪನ್ನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News