2.7 ಕೋಟಿ ರೂ. ವಂಚನೆ ಆರೋಪ: ಬಿಜೆಪಿ ಮುಖಂಡನಿಗೆ 14 ದಿನಗಳ ನ್ಯಾಯಾಂಗ ಬಂಧನ

Update: 2020-11-24 15:25 GMT
Photo: twitter.com/pvssarma

 ಗಾಂಧಿನಗರ, ನ.24: ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸೂರತ್ ಬಿಜೆಪಿ ಉಪಾಧ್ಯಕ್ಷ ಪಿವಿಎಸ್ ಶರ್ಮಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಸರಕಾರದ ಹಾಗೂ ಖಾಸಗಿ ಸಂಸ್ಥೆಗಳ ಜಾಹೀರಾತು ಪಡೆಯುವ ಉದ್ದೇಶದಿಂದ ತನ್ನ ಮಾಲಕತ್ವದ ದಿನಪತ್ರಿಕೆಯ ಪ್ರಸಾರ ಸಂಖ್ಯೆಯ ಬಗ್ಗೆ ಸುಳ್ಳು ಮಾಹಿತಿ ನೀಡಿ ಸುಮಾರು 2.7 ಕೋಟಿ ರೂ. ವಂಚಿಸಿರುವ ಆರೋಪದಲ್ಲಿ ಸೂರತ್ ಪೊಲೀಸರು ಶನಿವಾರ ಶರ್ಮಾರನ್ನು ಬಂಧಿಸಿದ್ದರು. ಶರ್ಮಾ ಮಾಲಕತ್ವದ ಸಂಕೇತ್ ಮೀಡಿಯಾ ಪ್ರೈ.ಲಿ. ಸಂಸ್ಥೆಯ ಮ್ಯಾನೇಜರ್‌ಗಳಾದ ಸೀತಾರಾಮ್ ಅಡುಕಿಯಾ ಮತ್ತು ಮುಖ್ತಾರ್ ಬೇಗ್‌ರನ್ನೂ ಬಂಧಿಸಲಾಗಿದ್ದು ಇವರಿಗೆ ನವೆಂಬರ್ 19ರಂದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶರ್ಮಾ ಕೆಲ ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿದ್ದರು. ತನ್ನ ವಿರುದ್ಧ ದೂರು ದಾಖಲಿಸಿರುವ ಮಾಹಿತಿ ತಿಳಿದೊಡನೆ ಶರ್ಮಾ ನವೆಂಬರ್ 16ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಬಳಿಕ ಸೂರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಅವರನ್ನು ನವೆಂಬರ್ 21ರಂದು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News