ಹರೇಕಳ-ಅಡ್ಯಾರ್ ಸೇತುವೆಯ ಅಗಲ 10 ಮೀಟರ್‌ಗೆ ಹೆಚ್ಚಳ: ಸಚಿವ ಮಾಧುಸ್ವಾಮಿ

Update: 2020-11-24 15:27 GMT

ಮಂಗಳೂರು, ನ.24: ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಬಹು ಉದ್ದೇಶಿತ ಹರೇಕಳ-ಅಡ್ಯಾರ್‌ಗೆ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪುನೀರು ತಡೆ ಅಣೆಕಟ್ಟಿನ ಅಗಲವನ್ನು 10 ಮೀಟರ್‌ಗಳಿಗೆ ಹೆಚ್ಚಿಸಲಾಗುವುದು. ಇದರಿಂದ ಭವಿಷ್ಯದಲ್ಲಿ ವಾಹನ ದಟ್ಟನೆ ಯನ್ನು ನಿರ್ವಹಿಸಲು ಅನುಕೂಲವಾಗಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಸೇತುವೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಇದೀಗ ಸೇತುವೆಯನ್ನು 7 ಮೀಟರ್ ಅಗಲಕ್ಕೆ ಮತ್ತು ಇಕ್ಕೆಲಗಳಲ್ಲಿ ತಲಾ ಒಂದೂವರೆ ಮೀಟರ್ ಅಗಲದ ಫುಟ್‌ಪಾತ್‌ಗೆ ವಿನ್ಯಾಸ ಗೊಳಿಸಲಾ ಗಿದೆ. ಅದನ್ನು ಸ್ವಲ್ಪ ಬದಲಾವಣೆ ಮಾಡಲಾಗುವುದು. ಸೇತುವೆಯ ಅಗಲವೇ 10 ಮೀಟರ್ ಇರುತ್ತದೆ. ಫುಟ್‌ಪಾತ್‌ನ ಅಗಲ ತಲಾ ಒಂದೊಂದು ಮೀಟರ್ ಇರಲಿದೆ. ಕ್ರಿಯಾ ಯೋಜನೆಯನ್ನು ಪುನಃ ವಿನ್ಯಾಸಕ್ಕೆ ಪೂರಕವಾಗಿ ಬದಲಾಯಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ನುಡಿದರು.

2017-18 ನೇ ಸಾಲಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪಶ್ಚಿಮವಾಹಿನಿ ಯೋಜನೆಯಡಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಯೋಜನೆಯ ಒಟ್ಟು ವೆಚ್ಚ 174 ಕೋ.ರೂ.ಗಳಾಗಿವೆ. ಒಪ್ಪಂದಂತೆ 2021ರ ನವೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಯ ಬೇಕಿದೆ. ಅವಧಿಗಿಂತ ಮುಂಚಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಅಣೆಕಟ್ಟು 0.66 ಟಿಎಂಸಿ ನೀರು ಶೇಖರಣೆಯ ಸಾಮರ್ಥ್ಯ ಹೊಂದಲಿದೆ. 261.20 ಹೆಕ್ಟೇರ್ ಕೃಷಿ ಜಮೀನಿಗೆ ಯೋಜನೆಯಿಂದ ನೀರು ದೊರಕಲಿದೆ ಎಂದು ಸಚಿವರು ಹೇಳಿದರು.

ಮಂಗಳೂರು ನಗರಪಾಲಿಕೆಯವರು ಕೂಡ ನೀರಿಗೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಸುತ್ತುಮುತ್ತಲಿನ ಇತರ ನಗರಾಡಳಿತ ಸಂಸ್ಥೆಗಳು ಮತ್ತು ಗ್ರಾಪಂಗಳು ಕುಡಿಯುವ ನೀರನ್ನು ಬಳಸಬಹುದಾಗಿದೆ. ಆದರೆ ಅದಕ್ಕೆ ತಕ್ಕುದಾದ ವ್ಯವಸ್ಥೆಗಳನ್ನು ಆಯಾ ಸಂಸ್ಥೆಗಳೇ ರೂಪಿಸಬೇಕಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹರೇಕಳದಲ್ಲಿ ನೇತ್ರಾವತಿ ನದಿಗೆ ಕಟ್ಟುತ್ತಿರುವ ಕಿಂಡಿ ಅಣೆಕಟ್ಟಿನ ಎತ್ತರವನ್ನು ಮೂರು ಮೀಟರ್‌ಗಳಿಗೆ ನಿಗದಿ ಪಡಿಸಲಾಗಿದೆ. ಇದರಿಂದ ಕೃಷಿ ಭೂಮಿ ಮುಳಗಡೆ ಆಗುವುದನ್ನು ತಪ್ಪಿಸಬಹುದಾಗಿದೆ. ಸೇತುವೆಯ ಉದ್ದ 520 ಮೀಟರ್ ಆಗಿದೆ. ವರ್ಟಿಲ್ ಲಿಫ್ಟ್‌ಗೇಟ್ ಮಾದರಿಯ 52 ಕಿಂಡಿಗಳಿರುತ್ತವೆ. ಕಾಮಗಾರಿ ಪೂರ್ಣಗೊಂಡಾಗ ಕಾಸರಗೋಡು ಕಡೆಯಿಂದ ಬೆಂಗಳೂರು ಕಡೆಗೆ ತೆರಳುವ ವಾಹನಗಳು ಮಂಗಳೂರು ನಗರವನ್ನು ಪ್ರವೇಶಿಸದೆ ತೊಕ್ಕೊಟ್ಟು-ಕೊಣಾಜೆ-ಹರೇಕಳ-ಅಡ್ಯಾರ್ ಮಾರ್ಗವಾಗಿ ಮುಂದೆ ತೆರಳಬಹುದಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು.

ಇನ್ನಷ್ಟು ವೆಂಟೆಡ್ ಡ್ಯಾಮ್‌ಗಳ ನಿರ್ಮಾಣ

ದ.ಕ. ಮತ್ತು ಉಡುಪಿ ಜಿಲ್ಲೆಗಳ ನದಿಗಳಲ್ಲಿ ಕುಡಿಯುವ ನೀರಿನ ಶೇಖರಣೆಗಾಗಿ ವೆಂಟೆಡ್ ಡ್ಯಾಂ ನಿರ್ಮಾಣದ ಯೋಜನೆಗಳನ್ನು ರೂಪಿಸಲಾ ಗಿದೆ. ಇದಕ್ಕಾಗಿ ಹಲವು ಪ್ರದೇಶಗಳನ್ನು ಗುರುತಿಸಲಾಗಿದ್ದು ಕೇಂದ್ರ ಸರಕಾರದ ಅನುದಾನ ದೊರೆತರೆ ಕೂಡಲೇ ಯೋಜನೆಗಳನ್ನು ಕಾರ್ಯ ಗತಗೊಳಿಸಲಾಗುವುದು. ಈಗಾಗಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಉಪ್ಪು ನೀರು,ಸಿಹಿ ನೀರು ಬೇರ್ಪಡಿಸುವ ಕಾರ್ಲ್ಯಾಂಡ್ ಡ್ಯಾಮ್ ನಿರ್ಮಾಣ ಯೋಜನೆಯಿದೆ ಎಂದು ಸಚಿವ ಜೆ.ಸಿ ಮಾಧು ಸ್ವಾಮಿ ಹೇಳಿದರು.

ಅಣೆಕಟ್ಟು ಗುತ್ತಿಗೆದಾರರಾದ ಜಿ.ಶಂಕರ್ ಉಡುಪಿ ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News