ಹಕ್ಕುಚ್ಯುತಿ ವಿವಾದ: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ನೋಟಿಸ್ ನೀಡಲು ಅರ್ನಬ್ ಆಗ್ರಹ

Update: 2020-11-24 15:32 GMT

ಹೊಸದಿಲ್ಲಿ, ನ.24: ವಿಧಾನಸಭೆಯ ಸಿಬ್ಬಂದಿಯೊಬ್ಬರ ಹೇಳಿಕೆಯ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ತಿಳಿಸಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ಗೆ ನೋಟಿಸ್ ನೀಡುವಂತೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಸುಪ್ರೀಂಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.

ಹಕ್ಕುಚ್ಯುತಿ ಆರೋಪಕ್ಕೆ ಸಂಬಂಧಿಸಿ , ವಿಧಾನಸಭೆಯ ಸ್ಪೀಕರ್ ಸೂಚನೆಯಂತೆ ತಾನು ಅರ್ನಬ್ ಗೋಸ್ವಾಮಿಗೆ ಪತ್ರವೊಂದನ್ನು ರವಾನಿಸಿರುವುದಾಗಿ ಮಹಾರಾಷ್ಟ್ರ ವಿಧಾನಸಭಾ ಸಚಿವಾಲಯದ ಉಪ ಕಾರ್ಯದರ್ಶಿ ವಿಲಾಸ್ ಅಠವಳೆ ಹೇಳಿಕೆ ನೀಡಿದ್ದರು. ಹಕ್ಕುಚ್ಯುತಿ ನಿರ್ಣಯದ ವಿಷಯದಲ್ಲಿ ಅರ್ನಬ್ ಸುಪ್ರೀಂಕೋರ್ಟ್ ಮೆಟ್ಟಿಲೇರದಂತೆ ಬೆದರಿಸುವ ಉದ್ದೇಶದಿಂದ ಈ ಪತ್ರ ಬರೆದಿರುವಂತೆ ಕಾಣುತ್ತಿದ್ದು ನಿಮ್ಮ(ಅಠವಳೆ) ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ವಿವರಿಸುವಂತೆ ತಿಳಿಸಿ ವಿಲಾಸ್ ಅಠವಳೆಗೆ ನವೆಂಬರ್ 6ರಂದು ಸುಪ್ರೀಂಕೋರ್ಟ್ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ತಾನು ಸ್ಪೀಕರ್ ನಿರ್ದೇಶನದಂತೆ ಪತ್ರ ಬರೆದಿದ್ದೇನೆಂದು ಅಠವಳೆ ಹೇಳಿರುವುದಾಗಿ ಅರ್ನಬ್ ಪರ ನ್ಯಾಯವಾದಿ ಹರೀಶ್ ಸಾಳ್ವೆ ನ್ಯಾಯಾಲಯದ ಗಮನಕ್ಕೆ ತಂದರು. ಅಠವಳೆ ಹಾಗೆ ಹೇಳಿದ್ದಾರೆ ಎಂದರೆ ಈ ಪ್ರಕರಣದಲ್ಲಿ ಸ್ಪೀಕರ್ ಅಭಿಪ್ರಾಯವನ್ನೂ ಪಡೆಯುವ ಅಗತ್ಯವಿದೆ ಎಂದು ನ್ಯಾಯಾಲಯದ ಸಲಹೆಗಾರ ಅರವಿಂದ್ ದಾತಾರ್ ಹೇಳಿದರು.

ಪ್ರಕರಣದಲ್ಲಿ ಅಠವಳೆ ನೀಡಿರುವ ಉತ್ತರದ ಬಗ್ಗೆ ವಿವರವಾದ ಪರಿಶೀಲನೆಯ ಅಗತ್ಯವಿದೆ ಎಂದು ತಿಳಿಸಿದ ನ್ಯಾಯಾಲಯ, ವಿಚಾರಣೆಯನ್ನು 2 ವಾರ ಮುಂದೂಡಿದೆ. ‘ ಮಹಾರಾಷ್ಟ್ರ ವಿಧಾನಸಭೆಯ ಅಧಿವೇಶನದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ನಡೆದಿದ್ದ ಕಲಾಪದ ಬಗ್ಗೆ ಗೋಪ್ಯತೆ ಕಾಯ್ದುಕೊಳ್ಳುವಂತೆ ತಿಳಿಸಿದ್ದರೂ, ಸ್ಪೀಕರ್ ಅನುಮತಿ ಪಡೆಯದೆ ಕಲಾಪದ ವರದಿಯನ್ನು ನ್ಯಾಯಾಲಯದಲ್ಲಿ ಮಂಡಿಸುವ ಮೂಲಕ ನೀವು ಉದ್ದೇಶಪೂರ್ವಕವಾಗಿ ಸ್ಪೀಕರ್ ಆದೇಶವನ್ನು ಉಲ್ಲಂಘಿಸಿದ್ದೀರಿ’ ಎಂದು ಮಹಾರಾಷ್ಟ್ರ ವಿಧಾನಸಭೆ ಸಚಿವಾಲಯದ ಉಪ ಕಾರ್ಯದರ್ಶಿ ಅರ್ನಬ್ ಗೋಸ್ವಾಮಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದಾಗಿ ಹರೀಶ್ ಸಾಳ್ವೆ ನ್ಯಾಯಾಲಯದ ಗಮನಕ್ಕೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News