ನಿವಾರ್ ಚಂಡಮಾರುತ : ಚೆನ್ನೈಯ ಎಲ್ಲ 3 ಬಂದರುಗಳು ಬಂದ್, ವಿಮಾನ ನಿಲ್ದಾಣಗಳಿಗೆ ಮುನ್ನೆಚ್ಚರಿಕೆ

Update: 2020-11-24 16:42 GMT

ಚೆನ್ನೈ, ನ. 24: ನಿವಾರ್ ಚಂಡಮಾರುತ ಬುಧವಾರ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಚೆನ್ನೈನ ಪ್ರಮುಖ ಮೂರು ಬಂದರುಗಳನ್ನು ಮುಚ್ಚಲಾಗಿದೆ. ಹಾಗೂ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ. 

ಚೆನ್ನೈ, ಕಾಮರಾಜರ್ ಹಾಗೂ ಕಟ್ಟುಪಲ್ಲಿ ಬಂದರಿನಲ್ಲಿ ಲಂಗರು ಹಾಕಿರುವ ಕಾರ್ಗೊ (ಸರಕು) ಹಡಗುಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ‘‘ಹಡಗುಗಳು ಹಾಗೂ ಬಂದರಿನ ಸುರಕ್ಷತೆಗಾಗಿ ನಾಲ್ಕು ಕಾರ್ಗೋ (ಸರಕು) ಹಡಗುಗಳನ್ನು ಒಂದೊಂದಾಗಿ ದೂರ ಸಮುದ್ರಕ್ಕೆ ಸ್ಥಳಾಂತರಿಸಲಾಗಿದೆ’’ ಎಂದು ಚೆನ್ನೈ ಬಂದರಿನ ಅಧ್ಯಕ್ಷ ಪಿ. ರವೀಂದ್ರನ್ ಹೇಳಿದ್ದಾರೆ. ತಟ ರಕ್ಷಣಾ ಪಡೆ, ಭಾರತೀಯ ನೌಕಾ ಪಡೆ ಹಾಗೂ ಸಾಗರ ತಂತ್ರಜ್ಞಾನದ ರಾಷ್ಟ್ರೀಯ ಸಂಸ್ಥೆಗೆ ಸೇರಿದ ಸಣ್ಣ ಹಡಗುಗಳನ್ನು ಜವಾಹರ್ ಹಡಗು ಕಟ್ಟೆ ಅಥವಾ ಹಡಗು ಜಲಾನಯನ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಚಂಡಮಾರುತವನ್ನು ಎದುರಿಸಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಗಕೆ ಘೋಷಿಸಲಾಗಿದೆ. ಚಂಡಮಾರುತ ನಿವಾರ್ ಅನ್ನು ಎದುರಿಸಲು ಸಿದ್ಧತೆ ನಡೆಸಲು ಚೆನ್ನೈ ವಿಮಾನ ನಿಲ್ದಾಣದ ನಿರ್ದೇಶಕರು ಮಂಗಳವಾರ ಉನ್ನತ ಮಟ್ಟದ ವರ್ಚುವಲ್ ಸಭೆ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ವಕ್ತಾರ, ಚಂಡ ಮಾರುತ ಎದುರಿಸಲು ಪ್ರತ್ಯೇಕ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಇದುವರೆಗೆ ಚೆನ್ನೈಯಿಂದ ನಿರ್ಗಮಿಸುವ ಹಾಗೂ ಆಗಮಿಸುವ ವಿಮಾನಗಳಿಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News