ಬೆಳ್ತಂಗಡಿ : ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

Update: 2020-11-24 16:53 GMT

ಬೆಳ್ತಂಗಡಿ : ಬಿಜೆಪಿ ಸರಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಅಧಿಕಾರಿಗಳು ಎಲ್ಲ ಕಾನೂನುಗಳನ್ನು ಮೀರಿ ಅವರು ಹೇಳಿದಂತೆ ಕಾರ್ಯನಿರ್ಹಿಸುವಂತೆ ಒತ್ತಾಯಿಸಲಾಗುತ್ತಿದೆ. ಬಾರ್ಯ ಸೇವಾಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ  ಒಂದೇ ದಿನ ಎರಡು ಬಾರಿ ಚುನಾವಣೆ ನಡೆಸಿ ಸಹಕಾರಿ ತತ್ವಗಳನ್ನು ಪ್ರಜಾಪ್ರಭುತ್ವವನ್ನು ಅಣಕಿಸಿದ ಅಧಿಕಾರಿಯನ್ನು ಕೂಡಲೇ ಕೆಲಸದಿಂದ ಅಮಾನತುಗೊಳಿಸಬೇಕು ಎಂದು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರಸ್ ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ ಒತ್ತಾಯಿಸಿದರು.

ಅವರು ಬಾರ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಂಭಾಗದಲ್ಲಿ  ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ  ಮಾತನಾಡಿದರು.

ಅಧ್ಯಕ್ಷರು ಯಾವುದೇ ಪಕ್ಷದವರಾಗಿರಲಿ ಆದರೆ ಅಕ್ರಮ ಆಯ್ಕೆ ಕಾನೂನು ಬಾಹಿರವಾಗಿದೆ. ಬಿಜೆಪಿಯಿಂದ ಇವಿಎಂ ಯಂತ್ರ ಹ್ಯಾಕ್ ಮಾಡಿದ್ದು ಆಯಿತು, ಕದ್ದದ್ದು ಆಯಿತು, ಈ ಬಾರಿ ಬಾರ್ಯದಲ್ಲಿ ಶಾಸಕರು ಚುನಾವಣಾಧಿಕಾರಿಯನ್ನೇ ಖರೀದಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಹೀಗೇ ಮುಂದುವರಿದಲ್ಲಿ, ಮುಂದೆ ತಾಲೂಕಿನಲ್ಲಿ ನಡೆದುಕೊಂಡು ಹೋಗುವುದೂ ಕಷ್ಟವಾಗಬಹುದು. ಅಧಿಕಾರಿಗಳು ಕೂಡಲೇ  ಚುನಾವಣಾಧಿಕಾರಿಯವರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರಕಟಿಸಿದರು. ಈ ಬ್ಯಾಂಕ್‍ನಲ್ಲಿ ಕೊಟ್ಯಂತರ ರೂ. ಅವ್ಯವಹಾರ ನಡೆದಿದೆ, ಬೇನಾಮಿ ಹೆಸರಿನಲ್ಲಿ ಸಾಲ ನೀಡುವಂತಹಾ ಪ್ರಕರಣಗಳೂ ಇವೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ  ಇದನ್ನು ಮುಚ್ಚಿಹಾಕಲು ಅಧ್ಯಕ್ಷರನ್ನು ಬದಲಾವಣೆ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಹರಿದಾಡುತ್ತಿದೆ, ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದರು.

ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿದರು.

ಪ್ರತಿಭಟನಾಕಾರ ಬಳಿ ಆಗಮಿಸಿ  ಅವರೊಂದಿಗೆ ಮಾತುಕತೆ ನಡೆಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಪ್ರವೀಣ್ ಬಿ. ನಾಯಕ್ ಅವರ ಬಳಿ ಪ್ರತಿಭಟನಾ ನಿರತರು ಅಹವಾಲು ಸಲ್ಲಿಸಿ, ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರವೀಣ್ ಬಿ. ನಾಯಕ್ ಅವರು ಚುನಾವಣಾ ಪ್ರಕ್ರಿಯೆ ಕುರಿತು ಚುನಾವಣಾಧಿಕಾರಿಗಳಿಂದ ಉತ್ತರ ಪಡೆದು,  ಚುನಾವಣಾ  ಪ್ರಕ್ರಿಯಗಳನ್ನು ಪರಿಶೀಲಿಸಿ ಜಿಲ್ಲಾ ಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು  ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು
 ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ತಣ್ಣೀರುಪಂತ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಇಳಂತಿಲ ಗ್ರಾ.ಪಂ. ಅಧ್ಯಕ್ಷ ಯು.ಕೆ. ಇಸುಬು,  ಮನೋಹರ್ ಇಳಂತಿಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಉಷಾ ಶರತ್, ಗ್ರಾ.ಪಂ. ಮಾಜಿ ಅಧ್ಯಕ್ಷ ನವೀನ್ ರೈ, ತೆಕ್ಕಾರು ಸಿ.ಎ. ಬ್ಯಾಂಕ್ ಅಧ್ಯಕ್ಷ ಅಬ್ದುಲ್ ರಜಾಕ್, ಬೆಳ್ತಂಗಡಿ ನಗರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಯೂಬ್, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದಯಾನಂದ ಬೆಳಾಲು, ಪ್ರವೀಣ್, ಸ್ಥಳೀಯ ನಾಗರೀಕರು, ಬ್ಯಾಂಕ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News