ಪದವಿ ಕಾಲೇಜಿನಲ್ಲಿ ಎಸ್‌ಒಪಿ ಪಾಲನೆ ಕಡ್ಡಾಯ: ಡಿಸಿ ರಾಜೇಂದ್ರ

Update: 2020-11-24 16:56 GMT

ಮಂಗಳೂರು, ನ.24: ದ.ಕ. ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ತರಗತಿಗಳನ್ನು ನಡೆಸುವಾಗ ಕೋವಿಡ್-19ರ ಹಿನ್ನೆಲೆಯಲ್ಲಿ ಸರಕಾರವು ಪ್ರಕಟಿಸಿರುವ ಪ್ರಾಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಕಡ್ಡಾಯವಾಗಿ ಅನುಸರಿಸಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪ್ರಾಂಶುಪಾಲರು, ಸಹಾಯಕ ಆಯುಕ್ತರು, ತಹಶೀಲ್ದಾರರು ಹಾಗೂ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಯುಜಿಸಿ ಪ್ರಕಟಿಸಿರುವ ಮಾರ್ಗಸೂಚಿಗಳನ್ವಯ ರಾಜ್ಯ ಸರಕಾರವು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಎಸ್‌ಒಪಿ ಹೊರಡಿಸಿದೆ. ಅದರಂತೆ ನ.17ರಿಂದ ಅಂತಿಮ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಭೌತಿಕ ತರಗತಿಗಳನ್ನು ಪ್ರಾರಂಭಿಸಬಹುದು. ಆದರೆ ಯಾವುದೇ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜ ರಾಗುವುದನ್ನು ಕಡ್ಡಾಯ ಮಾಡಬಾರದು ಎಂದರು.

ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೂರು ದಿನಗಳ ಮುಂಚೆ ಕೋವಿಡ್-19ರ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಕೊಂಡು ನೆಗೆಟಿವ್ ವರದಿ ಇದ್ದರೆ ಮಾತ್ರ ತರಗತಿಗಳಿಗೆ ಪ್ರವೇಶ ನೀಡಲು ಸೂಚಿಸಿದರು.

ತರಗತಿಗಳಿಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗಳಿಂದ ಅವರ ಹೆತ್ತವರು ಅಥವಾ ಪೋಷಕರು ಸಹಿ ಮಾಡಿದ ನಿಗದಿತ ನಮೂನೆಯ ಒಪ್ಪಿಗೆ ಪತ್ರ ಪಡೆಯಲು ಸೂಚಿಸಿದೆ. ಮಾರ್ಗಸೂಚಿಗಳನ್ವಯ ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡಬೇಕು ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯ ಗೊಳಿಸುವಂತೆ ಸೂಚಿಸಿದರು. ಕಾಲೇಜಿನ ಎಲ್ಲ ಉಪನ್ಯಾಸಕರು ತರಗತಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್ ಶಿಲ್ಡ್ ಧರಿಸುವುದರಿಂದ ರೋಗ ಪ್ರಸರಣವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 19,402 ಮಂದಿ ಕಾಲೇಜು ಉಪನ್ಯಾಸಕರು, ಕಚೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಕೋವಿಡ್ -19 ಪರೀಕ್ಷೆ ನಡೆದಿದೆ. ಅದರಲ್ಲಿ 45 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿ ದರು. ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು ಸಮೀಪದ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ವಿದ್ಯಾರ್ಥಿಗಳ ಕೋವಿಡ್ 19ರ ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.

ಜಿಲ್ಲೆಯ ಮಂಗಳೂರು, ಬಂಟ್ವಾಳ ಮತ್ತು ಮೂಡಬಿದಿರೆ ತಾಲೂಕನ್ನು ಹೊರತುಪಡಿಸಿ ಉಳಿದ ತಾಲೂಕುಗಳ ಪ್ರಾಂಶುಪಾಲರು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಸಹಾಯಕ ಆಯುಕ್ತ ಮದನ್ ಕುಮಾರ್, ತಹಶೀಲ್ದಾರರಾದ ಗುರುಪ್ರಸಾದ್, ಮಾಣಿಕ್ಯಂ, ಆರೋಗ್ಯ ಇಲಾಖೆಯ ಡಾ.ಶರತ್, ಲೀಡ್ ಕಾಲೇಜು ಪ್ರಾಂಶುಪಾಲ ಡಾ.ರಾಜಶೇಖರ್ ಹೆಬ್ಬಾರ್, ಕಾಲೇಜು ಶಿಕ್ಷಣ ವಿಶೇಷಾಧಿಕಾರಿ ಡಾ. ಶ್ರೀಧರಾ ಮಣಿಯಾಣಿ ಮತ್ತಿತ್ತರು ಉಪಸ್ಥಿತರಿದ್ದರು.

‘ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ’

ದ.ಕ. ಜಿಲ್ಲೆಯಲ್ಲಿ ನ.17ರಿಂದ ಪದವಿ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪ್ರಾರಂಭವಾಗಿದೆ. ಜಿಲ್ಲೆಯ 12,378 ಪ್ರಾರಂಭದ ದಿನ ಸರಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಅಂತಿಮ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಬಹುದು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಅಪ್ಪಾಜಿಗೌಡ ತಿಳಿಸಿದ್ದಾರೆ.

ಪ್ರಾರಂಭದ ದಿನ 754 ವಿದ್ಯಾರ್ಥಿಗಳು (ಶೇ 6,09) ತರಗತಿಗಳಿಗೆ ಹಾಜರಾಗಿದ್ದಾರೆ. ಒಂದು ವಾರದಲ್ಲಿ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಗಳ ಸಂಖ್ಯೆ ಗಣನೀಯವಾಗಿ ಏರಿದೆ. ದಿನಾಂಕ 23ರಂದು 1,681 ವಿದ್ಯಾರ್ಥಿಗಳು (ಶೇ. 13.6) ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ತಿಳಿಸಿದರು. ಕೆಲವು ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗಳ ವರದಿಗಾಗಿ ಕಾಯುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News