ಪುತ್ರಿಗೆ ನ್ಯಾಯ ನಿರಾಕರಣೆ: ದಂಪತಿಯಿಂದ ಒಡಿಶಾ ವಿಧಾನಸಭೆ ಬಳಿ ಆತ್ಮಾಹುತಿಗೆ ಯತ್ನ

Update: 2020-11-24 17:08 GMT

ಭುವನೇಶ್ವರ,ನ.24: ತಮ್ಮ ಪುತ್ರಿಗೆ ನ್ಯಾಯ ನಿರಾಕರಣೆಯಿಂದ ಹತಾಶಗೊಂಡ ದಂಪತಿ ಇಲ್ಲಿಯ ಒಡಿಶಾ ವಿಧಾನಸಭಾ ಕಟ್ಟಡದ ಬಳಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಪೊಲೀಸರು ಅದನ್ನು ವಿಫಲಗೊಳಿಸಿದ್ದಾರೆ.

 ಜುಲೈ 10ರಂದು ಮನೆ ಸಮೀಪ ಆಟವಾಡುತ್ತಿದ್ದಾಗ ಅಪಹರಿಸಲ್ಪಟ್ಟು ಕೊಲೆಯಾದ ತಮ್ಮ ಐದರ ಹರೆಯದ ಪುತ್ರಿಗೆ ನ್ಯಾಯವನ್ನು ನಿರಾಕರಿಸಿದ್ದು, ಇದರಿಂದ ತಾವು ಹತಾಶರಾಗಿದ್ದೇವೆ ಎಂದು ನಯಾಗಡ ಜಿಲ್ಲೆಯ ನಿವಾಸಿಗಳಾದ ಅಶೋಕ ಮತ್ತು ಸೌದಾಮಿನಿ ಸಾಹು ದಂಪತಿ ಸುದ್ದಿಗಾರರಿಗೆ ತಿಳಿಸಿದರು. ಎರಡು ವಾರಗಳ ಬಳಿಕ ಮಗುವಿನ ಶವ ಕಣ್ಣುಗಳನ್ನು ಕಿತ್ತ ಮತ್ತು ಮೂತ್ರಪಿಂಡಗಳನ್ನು ತೆಗೆಯಲಾಗಿದ್ದ ಸ್ಥಿತಿಯಲ್ಲಿ ಮನೆಯ ಹಿತ್ತಲಿನಲ್ಲಿ ಪತ್ತೆಯಾಗಿತ್ತು.

ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ದಂಪತಿಯಿಂದ ಸೀಮೆಎಣ್ಣೆ ಬಾಟ್ಲಿ ಮತ್ತು ಬೆಂಕಿಪೆಟ್ಟಿಗೆಯನ್ನು ಕಿತ್ತುಕೊಂಡ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಯಾಗಡ ಸದರ್ ಪೊಲೀಸ್ ಠಾಣೆಗೆ ನಾವು ದೂರನ್ನು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಪಿಯನ್ನು ಹೆಸರಿಸಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಶೋಕ ಸಾಹು ತಿಳಿಸಿದರು.

ನಯಾಗಡ ಜಿಲ್ಲೆಯ ಸಚಿವರ ಆಪ್ತ ಸಹಾಯಕನೋರ್ವ ತಮ್ಮ ಪುತ್ರಿಯ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಮತ್ತು ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಎಂದು ತಿಳಿಸಿದ ಸಾಹು,ದೂರನ್ನು ಹಿಂದೆಗೆದುಕೊಳ್ಳಲು ನಿರಾಕರಿಸಿದ್ದಕ್ಕಾಗಿ ಆರೋಪಿ ಮತ್ತು ಆತನ ಸಹಚರರು ಅ.26ರಂದು ತಮ್ಮ ಮೇಲೆ ದಾಳಿಯನ್ನೂ ನಡೆಸಿದ್ದರು ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News