ಅತ್ಯಾಚಾರಿಗಳಿಗೆ ಪಾಕಿಸ್ತಾನದಲ್ಲಿ ಇನ್ನು ಏನು ಶಿಕ್ಷೆ ಗೊತ್ತೇ ?

Update: 2020-11-25 05:21 GMT
ಇಮ್ರಾನ್ ಖಾನ್

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಲೈಂಗಿಕ ಹಲ್ಲೆ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ಅತ್ಯಾಚಾರಿಗಳ ’ಕೆಮಿಕಲ್ ಕ್ಯಾಸ್ಟ್ರೇಷನ್’ (ರಾಸಾಯನಿಕ ಬಳಸಿ ವೃಷಣಬೀಜ ಒಡೆಯುವುದು)ಗೆ ಅವಕಾಶ ಮಾಡಿಕೊಡುವ ಕಾನೂನಿಗೆ ಪ್ರಧಾನಿ ಇಮ್ರಾನ್ ಖಾನ್ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಾನೂನು ಸಚಿವಾಲಯ ಪ್ರಸ್ತಾಪಿಸಿದ ಈ ಅತ್ಯಾಚಾರ ನಿಗ್ರಹ ಕುರಿತ ಕರಡು ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಯೊ ಟಿವಿ ವರದಿ ಮಾಡಿದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಪೊಲೀಸಿಂಗ್‌ನಲ್ಲಿ ಮಹಿಳೆಯರ ಪಾತ್ರ ಹೆಚ್ಚಿಸುವುದು, ಅತ್ಯಾಚಾರ ಪ್ರಕರಣಗಳ ತ್ವರಿತಗತಿ ವಿಚಾರಣೆ ನಡೆಸುವುದು ಮತ್ತು ಸಾಕ್ಷಿಗಳ ಸುರಕ್ಷೆ ಮತ್ತಿತರ ಅಂಶಗಳು ಕರಡು ಮಸೂದೆಯಲ್ಲಿ ಸೇರಿವೆ ಎಂದು ಹೇಳಲಾಗಿದೆ. ಇದು ಗಂಭೀರ ವಿಷಯವಾಗಿರುವುದರಿಂದ ಇದರಲ್ಲಿ ವಿಳಂಬ ಸಹಿಸಲಾಗದು. ನಮ್ಮ ನಾಗರಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಅಗತ್ಯ ಎಂದು ಇಮ್ರಾನ್ ‌ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಈ ಶಾಸನ ಸ್ಪಷ್ಟ ಹಾಗೂ ಪಾರದರ್ಶಕವಾಗಿದ್ದು, ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. ಅತ್ಯಾಚಾರ ಸಂತ್ರಸ್ತರು ನಿರ್ಭೀತಿಯಿಂದ ದೂರು ದಾಖಲಿಸುವಂತಾಗಬೇಕು ಹಾಗೂ ಅವರ ಗುರುತನ್ನು ಸರ್ಕಾರ ಗೌಪ್ಯವಾಗಿ ಇಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿಯೇ ಗಲ್ಲಿಗೇರಿಸುವ ಕಾನೂನು ಜಾರಿಗೊಳಿಸುವಂತೆ ಕೆಲ ಸಚಿವರು ಸಲಹೆ ಮಾಡಿದ್ದಾರೆ. ಆದರೆ ಕ್ಯಾಸ್ಟ್ರೇಷನ್‌ನಿಂದ ಶಿಕ್ಷೆ ಆರಂಭವಾಗಲಿ ಎಂದು ಪ್ರಧಾನಿ ಸಲಹೆ ಮಾಡಿದರು ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News