ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣ ಮಾಡಿದ ಮಿಥುನ್ ರೈ !

Update: 2020-11-25 05:55 GMT

ಮಂಗಳೂರು, ನ. 25: ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ರಾಂತಿ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಇಡಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ, ಇದೀಗ ಕಾಂಗ್ರೆಸ್‌ನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಿಥುನ್ ರೈ ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ನಾಮಕರಣದ ಜಾಹೀರಾತು ಬೋರ್ಡ್ ಹಾಕಿದ್ದಾರೆ.

ಅಂದ ಹಾಗೆ, ಈ ನಾಮಕರಣ ನಡೆದಿರುವುದು ಪ್ರತಿಭಟನಾತ್ಮಕವಾಗಿ ಜಾಹೀರಾತು ಬೋರ್ಡ್ ರೂಪದಲ್ಲಿ. ವಿಮಾನ ನಿಲ್ದಾಣಕ್ಕೆ ಹೋಗುವ ಕೆಂಜಾರು ಸಮೀಪ ಹಾಗೂ ವಿಮಾನ ನಿಲ್ದಾಣದ ‘ಸುಸ್ವಾಗತ, ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು’ ಎಂಬ ಬೃಹತ್ತಾದ ಜಾಹೀರಾತು ಬೋರ್ಡ್ ‌ಗಳನ್ನು ಮಿಥುನ್ ರೈ ಭಾವಚಿತ್ರದೊಂದಿಗೆ ಅವರ ಹೆಸರಿನಲ್ಲಿ ಅಳವಡಿಸಲಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ, ಶ್ರೀನಿವಾಸ ಮಲ್ಯ ಸೇರಿದಂತೆ ಹಲವಾರು ಗಣ್ಯರ ಹೆಸರುಗಳ ನ್ನಿಡಬೇಕೆಂಬ ಒತ್ತಾಯ, ಪ್ರತಿಭಟನೆಗಳು ಹಲವಾರು ವರ್ಷಗಳಿಂದ ನಡೆಯುತ್ತಿವೆ. ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ನಿರ್ವಹಣೆಗಾಗಿ ಅದಾನಿ ಕಂಪನಿಗೆ ಹಸ್ತಾಂತರಗೊಂಡ ಬಳಿಕ ವಿಮಾನ ನಿಲ್ದಾಣದ ಪ್ರವೇಶ ದ್ವಾರ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನಾಮಫಲಕಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿನ ಜತೆಯಲ್ಲಿ ಅದಾನಿ ಏರ್‌ಪೋರ್ಟ್ಸ್ ಎಂಬ ಹೆಸರನ್ನೂ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ವಲಯದಲ್ಲಿ ಸಾಕಷ್ಟು ವಿರೋಧ, ಆಕ್ಷೇಪಗಳು ವ್ಯಕ್ತವಾಗಿವೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಬೇಕೆಂದು ಒತ್ತಾಯಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳೂ ಇಲ್ಲಿ ನಡೆದಿವೆ. ಈ ನಡುವೆಯೇ ಇಲ್ಲಿ ಇದೀಗ ಮಿಥುನ್ ರೈ ಹೆಸರಿನಲ್ಲಿ ಪ್ರತಿಭಟನಾ ಭಾಗವಾಗಿ ಹಾಕಲಾಗಿರುವ ಕೋಟಿ ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಸ್ವಾಗತ ಎಂಬ ಜಾಹೀರಾತು ಬೋರ್ಡ್ ಸಾಕಷ್ಟು ಕುತೂಹಲ ಕೆರಳಿಸಿದೆ.

‘‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡುವಂತೆ ನಾವು ಹೋರಾಟ ನಡೆಸುತ್ತಿದ್ದು, ಸಂಸದರಿಗೆ, ಸಚಿವರಿಗೆ ಎಚ್ಚರಿಕೆಯನ್ನು ನೀಡುವ ಹೋರಾಟದ ಭಾಗವಾಗಿ ಈ ಜಾಹೀರಾತು ಬೋರ್ಡ್ ‌ಗಳನ್ನು ಅಳವಡಿಸಲಾಗಿದೆ. ಆದಷ್ಟು ಶೀಘ್ರವಾಗಿ ಕೋಟಿ ಚೆನ್ನಯ ನಾಮಕರಣ ಮಾಡಬೇಕೆಂಬುದು ನಮ್ಮ ಬೇಡಿಕೆ. ಈ ಜಾಹೀರಾತು ಬೋರ್ಡ್ ‌ಗಳನ್ನು ನೋಡಿಯಾದರೂ ಆ ಕೆಲಸವಾಗಲಿ ಎಂಬುದು ನಮ್ಮ ಉದ್ದೇಶ. ನಾಮಕರಣವಾಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ.’’
-ವಿಥುನ್ ರೈ, ಅಧ್ಯಕ್ಷರು, ಜಿಲ್ಲಾ ಯುವ ಕಾಂಗ್ರೆಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News