ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ನಾಮಕರಣಕ್ಕೆ ಒತ್ತಾಯ

Update: 2020-11-25 12:16 GMT

ಮಂಗಳೂರು, ನ. 25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕಳ ಹೆಸರಿಡಬೇಕು ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಒತ್ತಾಯಿಸಿದೆ.

ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಅವರು ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರಿಡುವಂತೆ ನಮ್ಮ ಸಮಿತಿ ವತಿಯಿಂದ 23 ವರ್ಷಗಳಲ್ಲಿ ಅನೇಕ ಸಂದರ್ಭಗಳಲ್ಲಿ ಈ ಒತ್ತಾಯ ಮಾಡಿದ್ದೇವೆ. ಪ್ರತೀ ವರ್ಷ ಅಬ್ಬಕ್ಕ ಉತ್ಸವದಲ್ಲಿಯೂ ಈ ಬಗ್ಗೆ ಠರಾವು ಮಂಡಸಲಾಗಿದೆ ಎಂದು ತಿಳಿಸಿದ್ದಾರೆ.

ರಾಣಿ ಅಬ್ಬಕ್ಕಳ ಹೆಸರಿಡುವಂತೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿ ಸೇರಿದಂತೆ ಇನ್ನಿತರ ಅಧಿಕಾರಿಗಳಿಗೆ ಈಗಾಗಲೇ ಅನೇಕ ಬಾರಿ ಮನವಿ ಮಾಡಿದ್ದೇವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈವರೆಗೆ ರಾಣಿ ಅಬ್ಬಕ್ಕಳ ಹೆಸರು ಮಾತ್ರ ಚಾಲ್ತಿಯಲ್ಲಿತ್ತು. ಆದರೆ, ಸದ್ಯ ಬೇರೆ ಬೇರೆ ಹೆಸರುಗಳು ಕೇಳಿ ಬರತೊಡಗಿದೆ ಎಂದು ಹೇಳಿದರು.

ವೀರರಾಣಿ ಅಬ್ಬಕ್ಕಳು ಭಾರತದ ಪ್ರಪ್ರಥಮ ಹೋರಾಟಗಾರ್ತಿ, ಧೀರೋದಾತ್ತ ವನಿತೆ. ಆದರೆ ರಾಜ್ಯದಲ್ಲಿ ಅಬ್ಬಕ್ಕಳಿಗೆ ಸಿಗಬೇಕಾದ ಗೌರವ ಇನ್ನೂ ಸಿಕ್ಕಿಲ್ಲ. ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರಿಟ್ಟರೆ, ಹೊರ ರಾಜ್ಯ, ವಿದೇಶದಿಂದ ಆಗಮಿಸುವ ಸಾರ್ವಜನಿಕರಿಗೂ ವೀರ ವನಿತೆಯ ಪರಿಚಯವಾಗುತ್ತದೆ. ಅಲ್ಲದೆ, ಅದು ಆಕೆಗೆ ಸಲ್ಲುವ ಗೌರವ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷ ಆಲಿಯಬ್ಬ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News