ಮಂಗಳೂರಲ್ಲಿ ಆರ್ಟ್-ರೇಜ್ ಜಾಗೃತಿ ಆಂದೋಲನ

Update: 2020-11-25 13:54 GMT

ಮಂಗಳೂರು, ನ.25: ‘ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ’ ಪ್ರಯುಕ್ತ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕರ್ನಾಟಕದ ಮಂಗಳೂರು ಘಟಕವು ನಗರದ ಮಿನಿವಿಧಾನಸೌಧದ ಎದುರು ಆರ್ಟ್-ರೇಜ್ ಜಾಗೃತಿ ಆಂದೋಲನ ಕಾರ್ಯ ಕ್ರಮವನ್ನು ಬುಧವಾರ ಸಂಜೆ ಹಮ್ಮಿಕೊಂಡಿತು.

ಆರ್ಟ್-ರೇಜ್ ಜಾಗೃತಿ ಆಂದೋಲನಕ್ಕೆ ಮಂಗಳೂರು ಮಹಿಳಾ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ರೇವತಿ ಚಾಲನೆ ನೀಡಿದರು. ರೋಶನಿ ನಿಲಯ ಕಾಲೇಜಿನ ನಿವೃತ್ತ ಉಪನ್ಯಾಸಕಿ ಶೋಭನಾ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ನಿವೃತ್ತ ಉಪನ್ಯಾಸಕಿ ಶೋಭನಾ, ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಲೇ ಇವೆ. ದೇಶದ ನಾಗರಿಕರು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಕಚೇರಿ, ಕಾಲೇಜು, ರಸ್ತೆ, ಕತ್ತಲೆಯಲ್ಲಿ ನಡೆಯುವುದಷ್ಟೇ ಅತ್ಯಾಚಾರವಲ್ಲ; ಬಹುತೇಕ ಮನೆಗಳಲ್ಲಿ ಅತ್ಯಾಚಾರ, ಕಿರುಕುಳ ನೀಡುತ್ತಿರುವುದು ಸಹಿಸಲಸಾಧ್ಯ. ಇದು ದೇಶವೇ ತಲೆ ತಗ್ಗಿಸುವ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನೆ, ಕಚೇರಿ ಸಹಿತ ವಿವಿಧೆಡೆ ನಡೆಯುವ ಅತ್ಯಾಚಾರ, ಕಿರುಕುಳದ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕು. ಮಹಿಳೆಯು ಪುರುಷನಷ್ಟೇ ಕೆಲಸ ಮಾಡಬಲ್ಲಳು. ಎಲ್ಲ ಕ್ಷೇತ್ರದಲ್ಲೂ ಮಹಿಳೆ ತನ್ನ ಛಾಪು ಮೂಡಿಸಿದ್ದಾಳೆ. ಯಾವುದೇ ವಿಷಯಕ್ಕೂ ಹಿಂಜರಿಯುವ ಅಗತ್ಯವಿಲ್ಲ. ಧೈರ್ಯದಿಂದಲೇ ಮುನ್ನುಗ್ಗಬೇಕು. ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಕಾರ್ಯಕರ್ತೆಯರು ವಿಭಿನ್ನವಾಗಿ ಜಾಗೃತಿ ಆಂದೋಲನ ಹಮ್ಮಿಕೊಂಡಿರುವುದು ಮಾದರಿ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ರಾಜ್ಯಾಧ್ಯಕ್ಷೆ ಉಮೈರಾ ಬಾನು ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ಮಹಿಳೆಯರ ಮೇಲೆ ದಾಖಲೆಯ ಮಟ್ಟದಲ್ಲಿ ಅತ್ಯಾಚಾರ, ಕಿರುಕುಳ ನಡೆದಿವೆ. ಮಹಿಳೆಯ ರಕ್ಷಣೆಯು ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು.
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ನ ಕಾರ್ಯಕರ್ತೆಯರು ‘ಫ್ಲಾಶ್ ಮೋಬ್’ ಮೂಲಕ ಮಹಿಳಾ ದೌರ್ಜನ್ಯ ಕುರಿತ ಜಾಗೃತಿ ಮೂಡಿಸಿದರು. ಮಹಿಳೆಯು ಕಿರುಕುಳ, ದೌರ್ಜನ್ಯದ ಸರಪಳಿಯಿಂದ ಬಿಡಿಸಿಕೊಂಡು ಸ್ವಚ್ಛಂದವಾಗಿ ಸ್ವಾತಂತ್ರವನ್ನು ಪಡೆಯುವ ಸಂದೇಶವುಳ್ಳ ವರ್ಣಚಿತ್ರವು ಕುಂಚಗಳಲ್ಲಿ ಆಕರ್ಷಕವಾಗಿ ಮೂಡಿಬಂದಿತು.

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ನ ಕಾರ್ಯಕರ್ತೆಯರು ‘#SAYNOTORAPE’ ಹೆಸರಿನ ಕಿರು ಫ್ಲೇಕಾರ್ಡ್‌ಗಳನ್ನು ಬೆನ್ನಿಗೆ ಅಂಟಿಸಿಕೊಂಡು ವಿನೂತನವಾಗಿ ಆಂದೋಲನಕ್ಕೆ ನಾಂದಿ ಹಾಡಿದರು. ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ಕೌಟುಂಬಿಕ ದೌರ್ಜನ್ಯ ನಿಲ್ಲಿಸಿ’, ‘ಒಂಟೀ ಮಹಿಳೆಯ ರಕ್ಷಣೆ ಎಲ್ಲರ ಜವಾಬ್ದಾರಿ’, ‘ವಿನೂತನ ಕ್ರಾಂತಿಗೆ ಸ್ವಾಗತ’, ‘ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ’ ಎನ್ನುವ ಘೋಷಣೆಗಳುಳ್ಳ ಫ್ಲೇಕಾರ್ಡ್‌ಗಳ ಪ್ರದರ್ಶನದಿಂದ ಜಾಗೃತಿ ಆಂದೋಲನವು ಸಾರ್ವಜನಿಕರ ಗಮನ ಸೆಳೆಯಿತು.

ಜಾಗೃತಿ ಆಂದೋಲನದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ನ ಕಾರ್ಯಕರ್ತೆ ಮಫಾಝಾ ಆಕರ್ಷಕ ವರ್ಣಚಿತ್ರ ಬಿಡಿಸಿದರು. ಆಯೇಷಾ ಹುದಾ ‘ಗಲ್ಸ್ ರೆವಲ್ಯುಷನ್’, ಸಲ್ಮಾ ಮಂಗಳೂರು ‘ಅವಳ ಧ್ವನಿ’ ಶೀರ್ಷಿಕೆಯ ಕವನಗಳನ್ನು ವಾಚಿಸಿದರು.

ಆಂದೋಲನದಲ್ಲಿ ‘ಅನುಪಮಾ’ ನಿಯತಕಾಲಿಕೆಯ ಸಂಪಾದಕಿ ಶಹನಾಝ್ ಎಂ., ತಬಸ್ಸುಮ್, ಶಮಿನಾ ಅಫ್ಸನಾ ಸಹಿತ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News