ಮಂಗಳೂರು: ಫೇಸ್‌ಬುಕ್ ನಲ್ಲಿ ಹಣಕ್ಕಾಗಿ ಬೆದರಿಕೆ ; ಆರೋಪಿಗಳ ಬಂಧನ

Update: 2020-11-25 15:03 GMT

ಮಂಗಳೂರು, ನ. 25: ಮಹಿಳೆಯ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ವ್ಯಕ್ತಿಯೋರ್ವರಿಂದ ಅಶ್ಲೀಲ ಚಿತ್ರಗಳನ್ನು ಪಡೆದು ಅನಂತರ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಿವಾಸಿಗಳಾದ ಗೋಕುಲ್‌ ರಾಜು (20) ಮತ್ತು ಪವನ್ ಎಲ್. (20) ಬಂಧಿತ ಆರೋಪಿಗಳು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳು ಮಹಿಳೆಯ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಮಂಗಳೂರಿನ ಕೆಪಿಟಿಯ ರಾಜೇಶ್ ಎಂಬವರಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದರು.ನಂತರ ಹಣಕ್ಕಾಗಿ ಬೇಡಿಕೆ ಇಟ್ಟು ಹಣ ನೀಡದಿದ್ದರೆ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ ಹಣ ಪಡೆದುಕೊಂಡಿದ್ದರು ಎನ್ನಲಾಗಿದೆ. ಆ ಬಳಿಕ ಆರೋಪಿಗಳು ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು ಇದಕ್ಕೆ ರಾಜೇಶ್ ಒಪ್ಪದಿದ್ದಾಗ ಹಿರಿಯ ಪೊಲೀಸ್ ಅಧಿಕಾರಿಗಳು ಎಂದು ಬಿಂಬಿಸಿ ಕರೆ ಮಾಡಿ ವಂಚಿಸಿದ್ದಾರೆ ಎಂದು ದೂರಲಾಗಿದ್ದು, ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಮಾರ್ಗದರ್ಶನ, ಎಸಿಪಿ ವಿನಯ ವಿ.ಗಾಂವ್ಕರ್ ಅವರ ನಿರ್ದೇಶನದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಸಿ.ಗಿರೀಶ್, ಇ ಆ್ಯಂಡ್ ಎನ್.ಸಿ ಪೊಲೀಸ್ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News