ಪ.ಬಂಗಾಳ: ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ, ಕಚ್ಚಾಬಾಂಬ್‌ಗಳ ತೂರಾಟ

Update: 2020-11-25 16:35 GMT

ಕೋಲ್ಕತಾ,ನ.25: ಪ.ಬಂಗಾಳದ ಬೀರ್‌ಭೂಮ್ ಜಿಲ್ಲೆಯ ಸುರಿ ಎಂಬಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಪಕ್ಷದ ಕಾರ್ಯಕರ್ತರು ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು,ಈ ಸಂದರ್ಭ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನಗಳತ್ತ ಕಚ್ಚಾಬಾಂಬ್‌ಗಳು ಮತ್ತು ಕಲ್ಲುಗಳನ್ನು ತೂರಲಾಗಿದೆ.

ಸಿಮುರಾಲಿ ಎಂಬಲ್ಲಿ ಮಿನಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಟಿಎಂಸಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಕಲ್ಲುಗಳನ್ನು ತೂರಿ ಮಿನಿಟ್ರಕ್‌ನ ವಿಂಡ್ ಸ್ಕ್ರೀನ್ ಒಡೆಯಲಾಗಿದ್ದು,ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಟ್ರಕ್‌ನಿಂದ ಕೆಳಗೆ ಇಳಿದಿದ್ದರು. ಉಭಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದು, ಈ ವೇಳೆ ಕಚ್ಚಾಬಾಂಬ್‌ಗಳನ್ನು ಧಾರಾಳವಾಗಿ ತೂರಲಾಗಿತ್ತು. ಘರ್ಷಣೆಯ ಸಂದರ್ಭ ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನಗಳು ಸೇರಿದಂತೆ ಹಲವಾರು ವಾಹನಗಳು ಹಾನಿಗೀಡಾಗಿವೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಸಂಘರ್ಷನಿರತ ಗುಂಪುಗಳನ್ನು ಚದುರಿಸಿದರು. ಘರ್ಷಣೆಗಳು ಸಮೀಪದ ಗ್ರಾಮಗಳ ರಸ್ತೆಗಳಿಗೂ ಹಬ್ಬಿದ್ದು,ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಸುರಿಯಲ್ಲಿ ರ‍್ಯಾಲಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್, ಬಿಜೆಪಿ ಕಾರ್ಯಕರ್ತರು ತನ್ನ ಸಭೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಟಿಎಂಸಿ ಪ್ರಯತ್ನಿಸಿತ್ತು ಮತ್ತು ಅವರಲ್ಲಿ ಭೀತಿಯನ್ನುಂಟು ಮಾಡಲು ಹಿಂಸೆಯಲ್ಲಿ ತೊಡಗಿತ್ತು ಎಂದು ಹೇಳಿದರು. ಟಿಎಂಸಿ ಗೂಂಡಾಗಳ ಗುಂಡು ಹಾರಾಟದಿಂದ ಇಬ್ಬರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಘೋಷ್ ಹೇಳಿದರಾದರೂ ಪೊಲೀಸರು ಇದನ್ನು ದೃಢೀಕರಿಸಿಲ್ಲ. ಘೋಷ್ ಆರೋಪವನ್ನು ತಳ್ಳಿಹಾಕಿದ ಜಿಲ್ಲಾ ಟಿಎಂಸಿ ನಾಯಕ ಅಭಿಜಿತ್ ಸಿನ್ಹಾ ಅವರು,ಬಿಜೆಪಿ ಕಾರ್ಯಕರ್ತರ ಮೇಲಿನ ದಾಳಿಯಲ್ಲಿ ತನ್ನ ಪಕ್ಷದ ಕೈವಾಡವಿಲ್ಲ. ಟಿಎಂಸಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News