ಬಿಹಾರದ ಚುನಾವಣೆಗೆ ಇಲ್ಲದ ಕೋವಿಡ್ ನಿಯಮಗಳು ರೈತರಿಗೆ ಮಾತ್ರ ಅನ್ವಯವೇ:ಯೋಗೇಂದ್ರ ಯಾದವ್ ಪ್ರಶ್ನೆ

Update: 2020-11-26 10:06 GMT

ಹೊಸದಿಲ್ಲಿ : ಗುರುಗ್ರಾಮದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆಂದು ಹರ್ಯಾಣ ಪೊಲೀಸರು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರನ್ನು ವಶಪಡಿಸಿಕೊಂಡ ಬೆನ್ನಲ್ಲೇ ಯಾದವ್  ಅವರು ಮಹತ್ವದ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಪ್ರತಿಭಟನೆ ನಡೆಸಯುತ್ತಿರುವ ರೈತರ ಮೇಲೆ ಕ್ರಮ ಕೈಗೊಳ್ಳಲು ಕೋವಿಡ್ ಸಾಂಕ್ರಾಮಿಕ ಕಾರಣವೆಂದಾದಲ್ಲಿ ಇತ್ತೀಚೆಗೆ ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಅವರು ಹೇಗೆ  ರೈತರ ರ್ಯಾಲಿ ನಡೆಸಿದ್ದರು ಎಂದು ಪ್ರಶ್ನಿಸಿದ್ದಾರೆ. ``ಇದೊಂದು ವಿಚಿತ್ರ ಸಾಂಕ್ರಾಮಿಕ,'' ಎಂದು ಹರ್ಯಾಣದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರಕಾರದ ಕುರಿತಂತೆ ಯಾದವ್ ವ್ಯಂಗ್ಯವಾಡಿದ್ದಾರೆ.

``ಮೂರು ದಿನಗಳ ಹಿಂದೆ, ದುಷ್ಯಂತ್ ಚೌಟಾಲ ಅವರು ಸಾವಿರಾರು ರೈತರು ಸೇರಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಮಾಸ್ಕ್ ಇರಲಿಲ್ಲ, ಸಾಮಾಜಿಕ ಅಂತರವೂ ಇರಲಿಲ್ಲ. ಆಗ ಸಾಂಕ್ರಾಮಿಕವಿರಲಿಲ್ಲ, ಬಿಹಾರ ಚುನಾವಣೆ ಸಂದರ್ಭವೂ ಸಾಂಕ್ರಾಮಿಕವಿರಲಿಲ್ಲ. ಆದರೆ ರೈತರು  ಸೇರಿದಾಗ ಅಲ್ಲಿ ಸಾಂಕ್ರಾಮಿಕದ ಪ್ರಶ್ನೆ ಎದುರಾಗುತ್ತಿದೆ. ಇದು ವಿಚಿತ್ರ ಕಾಯಿಲೆಯೆಂದು ಕಾಣುತ್ತದೆ,'' ಎಂದು ಅವರು ಹೇಳಿದರು.

``ಬ್ರಿಟಿಷರು ಭಾರತೀಯ ಹೋರಾಟಗಾರರ ವಿರುದ್ಧ ಕೈಗೊಂಡಿದ್ದ ಕ್ರಮದ ರೀತಿಯಲ್ಲಿಯೇ ಇದೀಗ ಇಲ್ಲಿನ ಸರಕಾರ  ಕ್ರಮ ಕೈಗೊಳ್ಳುತ್ತಿದೆ,'' ಎಂದೂ ಅವರು ಹೇಳಿದ್ದಾರೆ.

ಹರ್ಯಾಣ ಸರಕಾರವು ದಿಲ್ಲಿಗೆ ತೆರಳುತ್ತಿರುವ ಸಾವಿರಾರು ರೈತರನ್ನು ತಡೆಯಲು ಜಲಫಿರಂಗಿಗಳು, ಅಶ್ರುವಾಯು ಪ್ರಯೋಗಿಸುತ್ತಿದೆ. ರಾಜ್ಯದಲ್ಲಿ ದೊಡ್ಡ ಗುಂಪು ಸೇರಬಾರದೆಂದು ನಿಷೇಧಾಜ್ಞೆಯೂ ಜಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News