ಕಸದ ತೊಟ್ಟಿಯಲ್ಲಿ ಪತ್ತೆಯಾದ ಪರಿತ್ಯಕ್ತ ಮಗುವಿಗೆ ‘ಪ್ರಜ್ವಲಾ’ ನಾಮಕರಣ

Update: 2020-11-26 10:28 GMT

ಉಡುಪಿ, ನ.26: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಪೊಲೀಸ್ ಠಾಣೆ ಉಡುಪಿ, ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಉಡುಪಿ ಹಾಗೂ ಶ್ರೀಕೃಷ್ಣಾನುಗ್ರಹ ಸಂತೆಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಬುಧವಾರ ಸಂತೆಕಟ್ಟೆಯ ಶ್ರೀಕೃಷ್ಣಾನುಗ್ರಹ ದತ್ತು ಸಂಸ್ಥೆಯಲ್ಲಿ ‘ಮಡಿಲು ಬೆಳಗು’ ದತ್ತು ಕಾರ್ಯಕ್ರಮ ಹಾಗೂ ನಗರದಲ್ಲಿ ಪತ್ತೆಯಾದ ಪರಿತ್ಯಕ್ತ ನವಜಾತ ಶಿಶುವಿನ ‘ನಾಮಕರಣ’ ಸಮಾರಂಭ ನಡೆಯಿತು.

ಈ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಅವರು ಉದ್ಘಾಟಿಸಿ ಮಾತನಾಡಿ, ಮಗುವಿನ ಸಂರಕ್ಷಣೆ ಎಲ್ಲರ ಹೊಣೆ. ಮಕ್ಕಳನ್ನು ತೊಟ್ಟಿಗೆ ಹಾಕದೆ ತೊಟ್ಟಿಲಿಗೆ ಹಾಕಿ ಎಂದು ಕರೆ ನೀಡಿದರು.

ಕಳೆದ ಆಗಸ್ಟ್ 10ರಂದು ನಗರದ ಕಸದ ತೊಟ್ಟಿಯೊಂದರಲ್ಲಿ ಪತ್ತೆಯಾಗಿ ಈಗ ಕೃಷ್ಣಾನುಗ್ರಹದಲ್ಲಿ ಪಾಲನೆಯಲ್ಲಿರುವ ಪರಿತ್ಯಕ್ತ ನವಜಾತ ಹೆಣ್ಣು ಮಗುವಿಗೆ ‘ಪ್ರಜ್ವಲಾ’ ಎಂದು ನಾಮಕರಣ ಮಾಡಲಾಯಿತು. ಮನೆಗಳಲ್ಲಿ ಸಾಮಾನ್ಯವಾಗಿ ಮಕ್ಕಳ ನಾಮಕರಣದ ಸಂದರ್ಭದಲ್ಲಿ ನಡೆಸುವ ಎಲ್ಲಾ ಧಾರ್ಮಿಕ ವಿಧಿಗಳನ್ನು ಇಲ್ಲಿ ನಡೆಸಿಕೊಡಲಾಯಿತು.

ಅಧ್ಯಕ್ಷತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಗಿ ವಹಿಸಿದ್ದು ಕಾನೂನುಬದ್ಧ ದತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.

ಅತಿಥಿಗಳಾಗಿ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಶ್ರೀಕೃಷ್ಣ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಉಮೇಶ್ ಪ್ರಭು, ಜಿಲ್ಲಾ ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಉಡುಪಿ ಮಕ್ಕಳ ಸಹಾಯವಾಣಿಯ ನಿರ್ದೇಶಕ ರಾಮಚಂದ್ರ ಉಪಾಧ್ಯ ಮಾತನಾಡಿದರು.

ಸಂತೆಕಟ್ಟೆ ಶ್ರೀಕೃಷ್ಣಾನುಗ್ರಹದ ಆಡಳಿತಾಧಿಕಾರಿ ಉದಯಕುಮಾರ್ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಾನುಗ್ರಹದ ಸಂಯೋಜಕ ಮರೀನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News