ಒಸ್ಮಾನಿಯಾ ವಿವಿ ಕ್ಯಾಂಪಸ್ಸಿಗೆ ಅಕ್ರಮ ಪ್ರವೇಶ ಆರೋಪ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್

Update: 2020-11-26 10:58 GMT

ಹೈದರಾಬಾದ್ : ಹೈದರಾಬಾದ್ನಲ್ಲಿರುವ ಒಸ್ಮಾನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ಸಿಗೆ ಅನುಮತಿಯಿಲ್ಲದೆ ಪ್ರವೇಶಿಸಿದ  ಆರೋಪದ  ಮೇಲೆ ಬಿಜೆಪಿ ಸಂಸದ ಹಾಗೂ ಪಕ್ಷದ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದಲ್ಲಿ ಸ್ಥಳೀಯಾಡಳಿತ ಸಂಸ್ಥೆಯ ಚುನಾವಣಾ ಪ್ರಚಾರಕ್ಕೆ ಸೂರ್ಯ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

ಬಿಜೆಪಿ ನಾಯಕ ಕ್ಯಾಂಪಸ್ಸಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆಂದು ಒಸ್ಮಾನಿಯಾ ವಿವಿಯ ಕುಲಸಚಿವರು  ದೂರು ನೀಡಿದ್ದಾರೆ ಎಂದು ತೆಲಂಗಾಣ ಪೊಲೀಸ್ ಮುಖ್ಯಸ್ಥ ಮಹೇಂದರ್ ರೆಡ್ಡಿ ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಚುನಾವಣೆಗಾಗಿ ಅವಿರತವಾಗಿ ಪ್ರಚಾರದಲ್ಲಿ ತೊಡಗಿರುವ ಸೂರ್ಯ ಮಂಗಳವಾರ ಒಸ್ಮಾನಿಯಾ ವಿವಿ ಆವರಣಕ್ಕೆ ತಮ್ಮ ಬೆಂಬಲಿಗರೊಂದಿಗೆ ತೆರಳಿದ್ದರೆನ್ನಲಾಗಿದೆ. ವಿವಿಯ ಗೇಟುಗಳಿಗೆ ಅಳವಡಿಸಲಾಗಿದ್ದ ಮುಳ್ಳುತಂತಿಯ ಬೇಲಿ ಹಾಗೂ ಬ್ಯಾರಿಕೇಡುಗಳನ್ನು ತೆಗೆದು  ಅವರು ಕ್ಯಾಂಪಸ್ಸಿನೊಳಗೆ ಪ್ರವೇಶಿಸಿ ಆರ್ಟ್ಸ್ ಕಾಲೇಜು ಕಟ್ಟಡದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದರೆಂದು  ಹೇಳಲಾಗಿದೆ.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆದೇಶದ ಮೇರೆಗೆ  ಪೊಲೀಸರು ತಮ್ಮ ಪ್ರವೇಶ ತಡೆದಿದ್ದರು ಎಂದು ಸೂರ್ಯ ಆರೋಪಿಸಿದ್ದಾರೆ. ``ಒಸ್ಮಾನಿಯಾ ವಿವಿಯಲ್ಲಿ ತೆಲಂಗಾಣ ಹೋರಾಟದ ಹುತಾತ್ಮರಿಗೆ  ನಾವು ಗೌರವ ಸಲ್ಲಿಸಲು ಬಯಸಿದ್ದೆವು ಆದರೆ ಕೆಸಿಆರ್ ಗೇಟುಗಳನ್ನು ಬಂದ್ ಮಾಡಿ ಬಿಟ್ಟಿದ್ದರು,'' ಎಂದು ಸೂರ್ಯ ಹೇಳಿದ್ದಾರೆ.

ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದು  ವಿವಿಯೇ ಬ್ಯಾರಿಕೇಡ್ ಅಳವಡಿಸಿತ್ತು ಎಂದು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News