ಯುಎಇ 'ಗೋಲ್ಡನ್ ವೀಸಾ' ಪಡೆದ ಬಂಟ್ವಾಳದ ಬಶೀರ್ ಕುಟುಂಬ

Update: 2020-11-26 12:06 GMT

ಬಿ.ಸಿ.ರೋಡ್ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡುವ 'ಗೋಲ್ಡನ್ ವೀಸಾ' ವನ್ನು ದುಬೈಯ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಜನರಲ್ ಮೆನೇಜರ್ ಬಂಟ್ವಾಳದ ಬಶೀರ್ ಮತ್ತು ಅವರ ಕುಟುಂಬಕ್ಕೆ ನೀಡಿದೆ.

ಕೊರೋನ ಸಂದರ್ಭದಲ್ಲಿ ಯುಎಇ ಯಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರಕಾರವು ಬಶೀರ್ ಅವರಿಗೆ ಗೋಲ್ಡನ್ ವೀಸಾ ನೀಡುವ ಮೂಲಕ ಪುರಸ್ಕರಿಸಿದೆ.

ಬಂಟ್ವಾಳದ ಅಬೂಬಕರ್ ಎಂಬವರ ಪುತ್ರ ಬಶೀರ್ ಅವರು 27 ವರ್ಷಗಳಿಂದ ಯುಎಇಯಲ್ಲಿ ಸೇವೆಯಲ್ಲಿದ್ದಾರೆ. 'ಗೋಲ್ಡನ್ ವೀಸಾವು ಯುಎಇಯಲ್ಲಿ ಹತ್ತು ವರ್ಷಗಳ ವಾಸ್ತವ್ಯಕ್ಕೆ ಅವಕಾಶ ನೀಡುವ ವೀಸಾ ಆಗಿದ್ದು ಬಶೀರ್ ಮತ್ತು ಅವರ ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ಈ ಗೋಲ್ಡನ್ ವೀಸಾ' ಲಭಿಸಿದೆ.

ಯುಎಇಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಟರ್ ಡಿಎಂ ಹೆಲ್ತ್ ಕೇರ್ ಗ್ರೂಪ್ ನ ಅಧೀನದಲ್ಲಿ 8 ಆಸ್ಪತ್ರೆಗಳು, 150ರಷ್ಟು ಕ್ಲಿನಿಕ್ ಗಳು, 250 ರಷ್ಟು ಫಾರ್ಮಸಿಗಳು ಕಾರ್ಯ ನಿರ್ವಹಿಸುತ್ತಿವೆ. ಬಶೀರ್ ಬಂಟ್ವಾಳ ಇದರ ಜನರಲ್ ಮೆನೇಜರ್ ಆಗಿದ್ದಾರೆ. ಕೊರೋನ ಸಂದರ್ಭದಲ್ಲಿ ಬಶೀರ್ ಬಂಟ್ವಾಳ್ ನೇತೃತ್ವದಲ್ಲಿ ಆಸ್ಟರ್ ಡಿಎಂ ಹೆಲ್ತ್ ಕೇರ್ ಗ್ರೂಪ್ ವತಿಯಿಂದ ಯುಎಇಯಾದ್ಯಂತ ಮಾಡಿರುವ ಮಾನವೀಯ ಸೇವೆ ಅಲ್ಲಿನ ಸರಕಾರದ ಅಭಿನಂದನೆಗೆ ಪಾತ್ರವಾಗಿತ್ತು.

ಲಾಕ್ ಡೌನ್ ಸಂದರ್ಭ ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರಿಗೆ ದಿನನಿತ್ಯ ಸಿದ್ಧ ಆಹಾರ, ಆಹಾರ ಸಾಮಗ್ರಿಗಳ ಕಿಟ್, ಆರೋಗ್ಯ ತಪಾಸಣೆ, ವಸತಿ ವ್ಯವಸ್ಥೆ, ಊರಿಗೆ ಮರಳುವವರಿಗೆ ವಿವಿಧ ಸವಲತ್ತುಗಳನ್ನು ಬಶೀರ್ ಬಂಟ್ವಾಳ ನೇತೃತ್ವದಲ್ಲಿ ಆಸ್ಟರ್ ಡಿಎಂ ಹೆಲ್ತ್ ಕೇರ್ ಗ್ರೂಪ್ ಮಾಡಿತ್ತು. ಇದಕ್ಕಾಗಿ ಆಸ್ಟರ್ ಡಿಎಂ ಹೆಲ್ತ್ ಕೇರ್ ಗ್ರೂಪ್ ಅನ್ನು ಯುಎಇ ಸರಕಾರ ಪ್ರಮಾಣ ಪತ್ರ ನೀಡಿ ಗೌರವಿಸಿತ್ತು.

ಬಂಟ್ವಾಳ ಕೆಳಗಿನ ಪೇಟೆಯ ನಿವಾಸಿ, ಸಾಮಾಜಿಕ ಕಾರ್ಯಕರ್ತ, ಕೊಡುಗೈದಾನಿ, ಅನಾಥ ಹಾಗೂ ನಿರ್ಗತಿಕರ ಸೇವೆಯಲ್ಲಿ ತೊಡಗಿಸಿ ಕೊಂಡ ಬಶೀರ್ ಬಂಟ್ವಾಳ ಅವರು ಲಾಕ್ ಡೌನ್ ಸಂಧರ್ಭದಲ್ಲಿ ಅನಿವಾಸಿ ಭಾರತೀಯರು ಹೆಚ್ಚು ವಾಸಿಸುವ ಪ್ರದೇಶದಲ್ಲಿ ತನ್ನ ಜೀವದ ಹಂಗನ್ನು ತೊರೆದು ವೈದ್ಯಕೀಯ ಚಿಕಿತ್ಸೆಗಳು, ಆಹಾರ ಪದಾರ್ಥಗಳನ್ನು ವಿತರಿಸಿದ್ದರು ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರನ್ನು ಸಂಪರ್ಕಿಸಿ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News