130ಕೋಟಿ ರೂ. ವೆಚ್ಚದಲ್ಲಿ ಉಡುಪಿ ಸ್ಮಾರ್ಟ್‌ಸಿಟಿ ಯೋಜನೆ

Update: 2020-11-26 13:13 GMT

ಉಡುಪಿ, ನ.26: ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಮೊದಲ ಸಾಮಾನ್ಯಸಭೆಯಲ್ಲಿ 130ಕೋಟಿ ರೂ. ವೆಚ್ಚದ ಉಡುಪಿ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಅದರ ಅನುಷ್ಠಾನದ ಕುರಿತು ಸದಸ್ಯರುಗಳಿಗೆ ಮಾಹಿತಿ ನೀಡಲಾಯಿತು.

ಈ ಯೋಜನೆಯಂತೆ ಸಿಸಿ ಕ್ಯಾಮೆರಾ, 5ಜಿ ತಂತ್ರಜ್ಞಾನ, ವೈಫೈ ವ್ಯವಸ್ಥೆ ಮತ್ತು ಡ್ರೋನ್ ಚಾರ್ಜರ್‌ಗಳನ್ನೊಂಡ 3000 ಸ್ಮಾಟ್ ಪೋಲ್‌ಗಳನ್ನು ನಗರದಲ್ಲಿ ಆಳವಡಿಸಲಾಗುವುದು. ಅದೇ ರೀತಿ ಅತ್ಯಾಧುನಿಕ ರೀತಿಯ ಬಸ್ ಬೇ, ರಿಕ್ಷಾ ಬೇ, ಬೈಕ್ ಬೇ ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಯೋಜನೆಯಾಧಿಕಾರಿಗಳು ಸಭೆಗೆ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಎಂದು ಶಾಸಕ ರಘುಪತಿ ಭಟ್, ಈ ಯೋಜನೆಯ ಡಿಪಿಆರ್‌ನ್ನು ಖಾಸಗಿ ಸಂಸ್ಥೆಯವರು ತಯಾರಿಸಿದ್ದು, ನಗರಸಭೆಯಿಂದ ಟೆಂಡರ್ ಕರೆಯಲಾಗುತ್ತದೆ. ಇದಕ್ಕೆ ನಗರಸಭೆಯಿಂದ ಯಾವುದೇ ಹಣ ಹೂಡಿಕೆ ಮಾಡಬೇಕಾಗಿಲ್ಲ. ಗುತ್ತಿಗೆ ವಹಿಸುವವರೇ ಸೇವಾ ಶುಲ್ಕ ಮತ್ತು ಜಾಹೀರಾತು ಮೂಲಕ ತಮ್ಮ ಹೂಡಿಕೆಯ ಹಣವನ್ನು ಪಡೆದುೆಕೊಳ್ಳಬೇಕು. ಈ ಕುರಿತು ನಗರಸಭೆಯಿಂದ ಒಪ್ಪಿಗೆ ಪಡೆದು ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಬೇಕು ತಿಳಿಸಿದರು.

ಎಲ್‌ಇಡಿ ದಾರಿದೀಪ: ದಾರಿದೀಪ ನಿರ್ವಹಣೆ ಮಾಡದ ಗುತ್ತಿಗೆದಾರ ರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬ ಸದಸ್ಯ ಪ್ರಭಾಕರ ಪೂಜಾರಿ ಆಗ್ರಹಕ್ಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಕೆಲಸ ಮಾಡದ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಬೇಕು ಎಂದು ರಮೇಶ್ ಕಾಂಚನ್ ಒತ್ತಾಯಿಸಿದರು.

ರಘುಪತಿ ಭಟ್ ಮಾತನಾಡಿ, ಈಗ ನಮ್ಮಲ್ಲಿ ದಾರಿದೀಪದ ವ್ಯವಸ್ಥೆ ಸರಿ ಇಲ್ಲ. 2013ರ ನಂತರ ಒಂದೇ ಒಂದು ದಾರಿದೀಪವನ್ನು ಬದಲಾಯಿಸಿಲ್ಲ. ಈಗ ಸರಕಾರವನ್ನು ಕಾಯದೆ ನಗರಸಭೆಯವರೇ ಟೆಂಡರ್ ಕರೆದು ಹಂತ ಹಂತವಾಗಿ ಎಲ್‌ಇಡಿ ದಾರಿದೀಪಗಳನ್ನು ಆಳವಡಿಸಲಾಗುವುದು ಎಂದರು. ದಾರಿದೀಪ ಸಮಸ್ಯೆ ಸದ್ಯವೇ ಪರಿಹಾರವಾಗಲಿದ್ದು, 1000 ಎಲ್‌ಇಡಿ ದಾರಿ ದೀಪ ಆಳವಡಿಸಲು ಟೆಂಡರ್ ಕರೆಯಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ನಗರಸಭೆಯ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. ಆದುದರಿಂದ ಅಂತಹ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲು ಟೆಂಡರ್ ಕರೆಯಬೇಕಾಗಿದೆ. ಮುಂದೆ ವಾರಾಹಿಯಿಂದ ನೀರು ಬಂದ ನಂತರ ಈ ಎಲ್ಲ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಿಳಿಸಿದರು.

ಅನುದಾನಕ್ಕಾಗಿ ಸಿಎಂ ಭೇಟಿ: ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಉಡುಪಿ ನಗರದಲ್ಲಿ ಒಳಚರಂಡಿ ಬಹಳ ದೊಡ್ಡ ಸಮಸ್ಯೆ ಯಾಗಿದೆ. ಇದಕ್ಕೆ ಸರಕಾರದಿಂದ ಯಾವುದೇ ಅನುದಾನ ಮಂಜೂರಾಗಿಲ್ಲ. ಮೊದಲು ಹಳೆ ನಗರಸಭೆ ವ್ಯಾಪ್ತಿಯ ಒಳ ಚರಂಡಿಯ ಸಮಸ್ಯೆಯನ್ನು ತಾಂತ್ರಿಕವಾಗಿ ಸರಿಪಡಿಸಲು ಡಿಪಿಆರ್ ತಯಾರಿ ಮಾಡಲಾಗುವುದು. ನಂತರ ಇಡೀ ನಗರಸಭೆ ತಂಡ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಯೋಜನೆಗೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸ ಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂಬಂಧ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರಸಭೆ ಸಾಮಾನ್ಯ ಸಭೆಯ ಸಿಂಧುತ್ವದ ಬಗ್ಗೆ ಸದಸ್ಯ ರಮೇಶ್ ಕಾಂಚನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಆನಂದ ಕಲ್ಲೋಳಿ ಕರ್, ಈ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿರುವುದರಿಂದ ಸಾಮಾನ್ಯ ಸಭೆ ನಡೆಸಲು ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಬಗ್ಗೆ ಕಾನೂನು ಸಲಹೆಗಳನ್ನು ಕೂಡ ಪಡೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳಿಗೂ ಮಾನ್ಯತೆ ಇರುತ್ತದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಉಪಸ್ಥಿತರಿದ್ದರು.

ಇಂದ್ರಾಣಿ ನದಿ ಶುಚಿತ್ವಕ್ಕೆ ಕ್ರಮ

ನಗರದ ಚರಂಡಿ ನೀರನ್ನು ಇಂದ್ರಾಣಿ ನದಿಗೆ ನೇರವಾಗಿ ಬಿಡುವ ಮೂಲಕ ಸಂಪೂರ್ಣ ಕಲುಷಿತ ಮಾಡಲಾಗಿದೆ. ಇದರಿಂದ ನದಿಯ ಇಕ್ಕೇಲಗಳಲ್ಲಿ ವಾಸ ಮಾಡುವುದೇ ಕಷ್ಟಕರವಾಗಿದೆಂದು ಸದಸ್ಯ ವಿಜಯ ಕೊಡವೂರು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ನಿಟ್ಟೂರಿನಲ್ಲಿರುವ ಶುದ್ದೀಕರಣ ಘಟಕ ಪುನರಜ್ಜೀವನಗೊಳಿಸಬೇಕು. ಅದೇ ರೀತಿ ನಗರದಲ್ಲಿರುವ ನಾಲ್ಕು ವೆಟ್‌ವೆಲ್‌ಗಳನ್ನು ಸರಿಪಡಿಸಬೇಕು. ಇದರಿಂದ ಶುದ್ದಿಕರಿಸಿದ ಚರಂಡಿ ನೀರನ್ನು ನದಿಗೆ ಬಿಡಬಹುದಾಗಿದೆ ಎಂದರು.

ಡಿಸಿ ಕಚೇರಿ ರಸ್ತೆಗೆ ಡಾ.ಟಿ.ಎಂ.ಎ.ಪೈ ಹೆಸರಿಡಲು ಆಗ್ರಹ

ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಡಿಸಿ ಕಚೇರಿವರೆಗಿನ ರಸ್ತೆಗೆ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯರ ಬದಲು ಡಾ.ಟಿ.ಎಂ.ಎ.ಪೈ ಅವರ ಹೆಸರು ಇಡುವಂತೆ ಸದಸ್ಯ ರಮೇಶ್ ಕಾಂಚನ್ ಒತ್ತಾಯಿಸಿದರು.

ಅದೇ ರೀತಿ ಬ್ರಹ್ಮಗಿರಿ ಸರ್ಕಲ್‌ಗೆ ಇಂದಿರಾಗಾಂಧಿ, ಹಳೆಯ ಡಯಾನ ಸರ್ಕಲ್‌ಗೆ ಅಂಬೇಡ್ಕರ್, ಕಲ್ಸಂಕ ಸರ್ಕಲ್‌ಗೆ ಪೇಜಾವರ ಸ್ವಾಮೀಜಿ ಮತ್ತು ಬನ್ನಂಜೆ ಸರ್ಕಲ್‌ಗೆ ಶ್ರೀನಾರಾಯಣ ಗುರು ಹೆಸರು ಇಡುವಂತೆ ಅವರು ಸಭೆಯಲ್ಲಿ ಆಗ್ರಹಿಸಿದರು.

ಆದರೆ ಡಿಸಿ ಕಚೇರಿ ರಸ್ತೆಗೆ ಡಾ.ವಿ.ಎಸ್.ಆಚಾರ್ಯ ಅವರ ಹೆಸರೇ ಇಡ ಬೇಕೆಂದು ಆಡಳಿತ ಪಕ್ಷದ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ಮುಂದೆ ಈ ಕುರಿತು ಎಲ್ಲ ಸದಸ್ಯರ ಸಭೆ ಕರೆದು ಚರ್ಚಿಸಲಾಗುವುದು ಎಂದು ರಘುಪತಿ ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News