ನ.27 : ಬಿಜೆಪಿಯಿಂದ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಚಾಲನೆ

Update: 2020-11-26 13:25 GMT

ಉಡುಪಿ, ನ.26: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಾಳೆ ಜಿಲ್ಲೆಯ ಎರಡು ಕಡೆ ಗ್ರಾಮ ಸ್ವರಾಜ್ಯ ಸಮಾವೇಶ ವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿ ಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಗ್ರಾಮಾಂತರ, ಕುಂದಾಪುರ, ಬೈಂದೂರು ಮಂಡಲಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ 11:00ಕ್ಕೆ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಹಾಗೂ ಉಡುಪಿ ನಗರ, ಕಾಪು, ಕಾರ್ಕಳ ಮಂಡಲಗಳಿಗೆ ಸಂಬಂಧಿಸಿದಂತೆ ಅಪರಾಹ್ನ 3:00ಕ್ಕೆ ಉಡುಪಿಯ ಅಂಬಾಗಿಲು -ಪುತ್ತೂರಿನ ಶ್ರೀಲಕ್ಷ್ಮಿ ವೆಂಕಟೇಶ ದೇವ ಸ್ಥಾನದ ಬಳಿ ಇರುವ ಅಮೃತ್ ಗಾರ್ಡನ್‌ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶಗಳು ನಡೆಯಲಿವೆ ಎಂದರು.

ಜಿಲ್ಲೆಯ ಒಟ್ಟು 154 ಗ್ರಾಮ ಪಂಚಾಯತ್‌ಗಳ ಪೈಕಿ 98 ಗ್ರಾಪಂಗಳಲ್ಲಿ ಈಗ ಬಿಜೆಪಿ ಬೆಂಬಲಿತ ಆಡಳಿತವಿದೆ. ಮುಂದಿನ ಚುನಾವಣೆಯಲ್ಲಿ 130ಕ್ಕೂ ಗ್ರಾಮಪಂಚಾಯತ್‌ಗಳನ್ನು ಗೆಲ್ಲುವ ಗುರಿಯೊಂದಿಗೆ ಈ ಸಮಾವೇಶವನ್ನು ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ನಾಳೆಯಿಂದ ಡಿ.3ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದವರು ನುಡಿದರು.

ಗ್ರಾಪಂ ಚುನಾವಣೆಗೆ ಪೂರ್ವಭಾವಿಯಾಗಿ ಈಗಾಗಲೇ ಗ್ರಾಪಂ ಮಟ್ಟದಲ್ಲಿ ಕುಟುಂಬ ಮಿಲನ ಕಾರ್ಯಕ್ರಮಗಳ ಜೊತೆಗೆ ಪಂಚರತ್ನ ಸಮಿತಿ ಹಾಗೂ ಪೇಜ್ ಪ್ರಮುಖರನ್ನು ನೇಮಕ ಮಾಡಲಾಗಿದೆ. ಗೆಲುವಿಗಾಗಿ ಪಕ್ಷದ ಕಾರ್ಯಕರ್ತರ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ಸುರೇಶ್ ನಾಯಕ್ ಹೇಳಿದರು.

ರಾಜ್ಯಮಟ್ಟದಲ್ಲಿ ನಡೆಯುವ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ನಾಳೆ ಕೋಟೇಶ್ವರದಲ್ಲಿ ಚಾಲನೆ ನೀಡಲಾಗುತ್ತದೆ. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್, ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹಾಗೂ ಜಿಲ್ಲೆಯ ಶಾಸಕರು ಸಮಾವೇಶದಲ್ಲಿ ಪಾಲ್ಗೊಳ್ಳುವರು.

ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಗ್ರಾಪಂ ಪ್ರಮುಖರ ಸಹಿತ, ಸಂಸದರು, ಶಾಸಕರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮಂಡಲಗಳ ಪದಾಧಿಕಾರಿಗಳು, ಮಂಡಲಗಳ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರ ಮತ್ತು ಶಕ್ತಿಕೇಂದ್ರಗಳ ಪ್ರಮುಖರು, ಜಿಪಂ, ತಾಪಂ ಎಪಿಎಂಸಿಯ ಚುನಾಯಿತ ಸದಸ್ಯರು ಪಾಲ್ಗೊಳ್ಳುವರು ಎಂದು ಸುರೇಶ್ ನಾಯಕ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಹಾಗೂ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News