ಸಕಾಲದಲ್ಲಿ 22,82,55,866 ಅರ್ಜಿಗಳ ಇತ್ಯರ್ಥ : ಡಾ.ಮಮತಾ

Update: 2020-11-26 13:55 GMT

ಉಡುಪಿ, ನ.26: ಪ್ರತಿಯೊಬ್ಬ ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾದ ಸಕಾಲ ಯೋಜನೆ ಯಡಿ ಒಟ್ಟು 98 ಇಲಾಖೆಗಳ 1020ಕ್ಕೂ ಹೆಚ್ಚಿನ ನಾಗರಿಕ ಕೇಂದ್ರಿತ ಸೇವೆ ಗಳನ್ನು ಸೇರ್ಪಡೆ ಮಾಡಲಾಗಿದೆ. ಈವರೆಗೆ 22,88,81,652 ಅರ್ಜಿಗಳನ್ನು ಸ್ವೀಕರಿಸಿ 22,82,55,866 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಸಕಾಲ ಯೋಜನೆಯ ಹೆಚ್ಚುವರಿ ಮಿಷನ್ ನಿರ್ದೇಶಕಿ ಡಾ.ಬಿ.ಆರ್.ಮಮತಾ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಅವರು ಮಾತನಾಡು ತಿದ್ದರು. ಸಕಾಲದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಕಾಲ ಸಪ್ತಾಹವನ್ನು ಆಚರಿಸಲಾಗುತ್ತಿದೆ. ನ.30ರಿಂದ ಡಿ.5ರವರೆಗೆ ನಗರಾಭಿವೃದ್ಧಿ, ಕಂದಾಯ ಸಾರಿಗೆ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳಲ್ಲಿ ಹಾಗೂ ಡಿ.7ರಿಂದ ಡಿ.11ರವರೆಗೆ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಪ್ತಾಹವನ್ನು ಆಚರಿಸಲಾಗುವುದು ಎಂದರು.

ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕ ಕೋರಿಕೆಯ ಅರ್ಜಿಗಳನ್ನು ಕಾನೂನಿನ ವ್ಯಾಪ್ತಿಯೊಳಗೆ ಪರಿಹರಿಸಬೇಕು. ತಪ್ಪಿದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಹೊಣೆಗಾರರಾಗಬೇಕಾಗುತ್ತದೆ. ಸಕಾಲ ಯೋಜನೆಯಡಿ ಸಾರ್ವಜನಿಕರಿಗೆ ಸರಳವಾಗಿ ವಿಳಂಬವಿಲ್ಲದೆ ತಮ್ಮ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಇಲಾಖೆಗಳು ಮುಂದಾಗಬೇಕು. ಇವುಗಳ ಮೇಲುಸ್ತುವಾರಿ ತಂಡವನ್ನು ರಚಿಸಿ ಆಗಿಂದಾಗ್ಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಸಕಾಲದಡಿಯಲ್ಲಿ ಸ್ವೀಕೃತವಾದ ಅರ್ಜಿಗಳಿಗೆ 15 ಅಂಕಿಯ ಜಿ.ಎಸ್.ಇ. ಸಂಖ್ಯೆಯನ್ನು ತಪ್ಪದೆ ನೀಡಬೇಕು. ಇದರ ಜೊತೆಗೆ ಅರ್ಜಿಯ ಪ್ರತಿಯೊಂದು ಹಂತದಲ್ಲಿಯೂ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶವನ್ನು ರವಾನಿಸಬೇಕು ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮೀಣ ಮತುತಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಸಕಾಲ ಸೇವೆಗಳನ್ನು ಪರಿಣಾಮ ಕಾರಿ ಅನುಷ್ಟಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ತಮ್ಮ ಮೇಲಿನ ಅಧಿಕಾರಿಗಳನ್ನು ಸಂಪರ್ಕಿಸಿ ನ್ಯೂನ್ಯತೆಯನ್ನು ಸರಿಡಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News