ಅಮೆರಿಕ: ಕೊರೋನಗೆ ದಿನದಲ್ಲಿ 2,439 ಬಲಿ

Update: 2020-11-26 15:07 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ನ. 26: ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,439 ಮಂದಿ ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ಬುಧವಾರ ತಿಳಿಸಿವೆ. ಇದು ಆರು ತಿಂಗಳ ಅವಧಿಯಲ್ಲೇ ಕೊರೋನ ವೈರಸ್‌ನ ಅತ್ಯಧಿಕ ಸಾವಿನ ದರವಾಗಿದೆ.

ಇದರೊಂದಿಗೆ ದೇಶದಲ್ಲಿ ಈವರೆಗೆ ಮಾರಕ ಸಾಂಕ್ರಾಮಿಕಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 2,62,080ಕ್ಕೆ ಏರಿದೆ. ಇದೇ ಅವಧಿಯಲ್ಲಿ ಸುಮಾರು 2 ಲಕ್ಷ ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ.

 ಕೊರೋನ ವೈರಸ್ ಸೋಂಕು ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ, ಅಮೆರಿಕದ ‘ಥ್ಯಾಂಕ್ಸ್‌ಗಿವಿಂಗ್’ ಎಂಬ ದೊಡ್ಡ ಹಬ್ಬಾಚರಣೆಗೆ ಅಡಚಣೆಯಾಗಿದೆ. ಈ ಹಬ್ಬದ ವೇಳೆ ತಮ್ಮ ಕುಟುಂಬ ಸದಸ್ಯರ ಜೊತೆಗಿರಲು ಜನರು ದೇಶಾದ್ಯಂತ ಭಾರೀ ಸಂಖ್ಯೆಯಲ್ಲಿ ಪ್ರಯಾಣ ಕೈಗೊಳ್ಳುತ್ತಾರೆ. ಆದರೆ, ಈ ಬಾರಿ ಜನರು ವಿಮಾನ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿರುವ ಪ್ರಮಾಣ ತೀರಾ ಕಡಿಮೆಯಾಗಿದೆ.

6 ಕೋಟಿ ದಾಟಿದ ಜಾಗತಿಕ ಸೋಂಕಿತರ ಸಂಖ್ಯೆ

 ಜಗತ್ತಿನಾದ್ಯಂತ ಈವರೆಗೆ 6 ಕೋಟಿಗೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ಸಂಗ್ರಹಿಸಿದ ಅಂಕಿಅಂಶಗಳು ಬುಧವಾರ ತಿಳಿಸಿವೆ. ಈ ಪೈಕಿ 14.15 ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ.

ಹೆಚ್ಚಿನ ದೇಶಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವನ್ನು ಪತ್ತೆಹಚ್ಚುವ ಪರೀಕ್ಷಾ ಸಾಮಗ್ರಿಗಳಿಲ್ಲ ಅಥವಾ ಲಕ್ಷಣಗಳು ಕಂಡುಬರುವ ಅಥವಾ ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ.

ರಶ್ಯ ಸೇರಿದಂತೆ ಯುರೋಪ್‌ನಲ್ಲಿ ಸುಮಾರು 3.88 ಲಕ್ಷ ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News