ಆರ್‌ಟಿಸಿ ತಿದ್ದುಪಡಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಉಪತಹಶೀಲ್ದಾರ್ : ಬಂಟ್ವಾಳ ತಾಲೂಕು ಕಚೇರಿಗೆ ಎಸಿಬಿ ದಾಳಿ

Update: 2020-11-26 15:12 GMT

ಬಂಟ್ವಾಳ, ನ.26: ಆರ್‌ಟಿಸಿ ತಿದ್ದುಪಡಿ ಮಾಡಲೆಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಬಂದ ದೂರಿನನ್ವಯ ದಕ್ಷಿಣ ಕನ್ನಡದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಬಂಟ್ವಾಳ ತಾಲೂಕು ಕಚೇರಿಗೆ ದಾಳಿ ನಡೆಸಿದ್ದಾರೆ.

ಎಸಿಬಿ ಕಾರ್ಯಾಚರಣೆ ಸಂದರ್ಭ ಉಪತಹಶೀಲ್ದಾರ್ ರವಿಶಂಕರ್ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ. ಗುರುವಾರ ಮಧ್ಯಾಹ್ನ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂತ್ರಸ್ತರೊಬ್ಬರು ತಾಯಿಯ ಹೆಸರಲ್ಲಿರುವ ಜಾಗಕ್ಕೆ ಸಂಬಂಧಿಸಿ ಆರ್‌ಟಿಸಿಯಲ್ಲಿ ತಿದ್ದುಪಡಿ ಮಾಡಿಕೊಡಲು ಉಪತಹಶೀಲ್ದಾರ್ 1,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಪ್ರಕರಣ ದಾಖಲಿಸಲಾಗಿದ್ದು, 1,000 ರೂ. ಲಂಚ ಸ್ವೀಕರಿಸುವ ಸಂದರ್ಭ ಅಧಿಕಾರಿಗಳು ದಾಳಿ ನಡೆಸಿದರು.

ಪೊಲೀಸ್ ಅಧೀಕ್ಷಕ ಬೋಪಯ್ಯ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಂಸುಂದರ್, ಗುರುರಾಜ್ ಹಾಗೂ ಸಿಬ್ಬಂದಿ ಹರಿಪ್ರಸಾದ್, ರಾಧಾಕೃಷ್ಣ, ಉಮೇಶ್, ರಾಧಾಕೃಷ್ಣ ಡಿ.ಎ., ಪ್ರಶಾಂತ್ ಎಂ., ವೈಶಾಲಿ, ರಾಜೇಶ್ ಪಿ., ರಾಕೇಶ್ ವಾಗ್ಮೇನ್, ಸತೀಶ್ ಹಾಗೂ ಭರತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News