ಸ್ಟ್ರಾ, ಹೀರುಕೊಳವೆಯ ಲೋಟ ಒದಗಿಸಲು ಕೋರಿದ್ದ ಸ್ಟಾನ್ ಸ್ವಾಮಿಯ ಅರ್ಜಿ ವಿಚಾರಣೆ ಡಿ.4ಕ್ಕೆ ಮುಂದೂಡಿಕೆ

Update: 2020-11-26 16:14 GMT

ಹೊಸದಿಲ್ಲಿ, ನ.26: ಎಲ್ಗರ್ ಪರಿಷದ್ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಆದಿವಾಸಿ ಹಕ್ಕುಗಳ ಹೋರಾಟಗಾರ , ಪಾರ್ಕಿನ್‌ಸನ್ ರೋಗದಿಂದ ಬಳಲುತ್ತಿರುವ ಸ್ಟಾನ್ ಸ್ವಾಮಿ ತನಗೆ ಸ್ಟ್ರಾ(ಹೀರುಕಡ್ಡಿ) ಮತ್ತು ಹೀರುಕೊಳವೆಯ ಲೋಟ ಒದಗಿಸಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಡಿಸೆಂಬರ್ 4ಕ್ಕೆ ಮುಂದೂಡಿದೆ.

ಗುರುವಾರ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಸಂದರ್ಭ ವಾದ ಮಂಡಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ' ಸ್ವಾಮಿಯನ್ನು ಬಂಧಿಸುವಾಗ ಅವರ ಬಳಿಯಿದ್ದ ಸ್ಟ್ರಾ ಮತ್ತು ಹೀರುಕೊಳವೆಯನ್ನು ತಾನು ವಶಕ್ಕೆ ಪಡೆದಿದ್ದೆ ಎಂಬ ಅರ್ಜಿದಾರರ ಉಲ್ಲೇಖ ಸರಿಯಲ್ಲ' ಎಂದು ಹೇಳಿತು. ಆಗ ವಿಶೇಷ ನ್ಯಾಯಾಲಯ ಸ್ವಾಮಿಯ ಅರ್ಜಿಯನ್ನು ತಿರಸ್ಕರಿಸಿತು.

  ಈ ಸಂದರ್ಭ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಸ್ವಾಮಿ, ಸ್ಟ್ರಾ ಹೀರುಕೊಳವೆಯ ಲೋಟ ಮತ್ತು ಜೈಲಿನೊಳಗೆ ಚಳಿಗಾಲದಲ್ಲಿ ಧರಿಸುವ ಬಟ್ಟೆ ಒದಗಿಸಬೇಕೆಂದು ಹೊಸ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು. ಈ ಅರ್ಜಿಗೆ ಜೈಲು ಅಧಿಕಾರಿಗಳ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ತಿಳಿಸಿದ ವಿಶೇಷ ನ್ಯಾಯಾಲಯ, ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News