ದೇಶ ಮಾರುವ ಮೊದಲೇ ಎಚ್ಚೆತ್ತುಕೊಳ್ಳೋಣ: ಸೀತಾರಾಮ ಬೇರಿಂಜೆ

Update: 2020-11-26 16:28 GMT

ಮಂಗಳೂರು, ನ.26: ಪ್ರಧಾನಿ ನರೇಂದ್ರ ಮೋದಿ ಅಂದು ಪಾರ್ಲಿಮೆಂಟ್‌ನ ಮೆಟ್ಟಲು ಏರುವಾಗ ನೆಲಮುಟ್ಟಿ ನಮಸ್ಕರಿಸಿದವರು ಮುಂದೊಂದು ದಿನ ದೇಶವನ್ನೇ ಮಾರಲು ಮುಂದಾಗಬಹುದು, ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಎಐಟಿಯುಸಿ ಮುಖಂಡ ಸೀತಾರಾಮ ಬೇರಿಂಜೆ ತಿಳಿಸಿದ್ದಾರೆ.

ನಗರದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಿಂದ (ಜೆಸಿಟಿಯು) ಗುರುವಾರ ಹಮ್ಮಿಕೊಳ್ಳಲಾದ ಒಂದು ದಿನದ ರಾಷ್ಟ್ರೀಯ ಮುಷ್ಕರ ದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕಾರ್ಯ ವೈಖರಿಯ ಬಗ್ಗೆ ಜನರು ಮೌನವಾಗಿರದೆ ಎಚ್ಚೆತ್ತುಕೊಳ್ಳಬೇಕು. ಸರಕಾರದ ತಪ್ಪು ನೀತಿಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ ಎಂದರು.

ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಲಾಕ್‌ಡೌನ್ ಹೇರಿ ಜನರನ್ನು ಮನೆಯೊಳಗಿರಿಸಿ ಕೃಷಿ, ಕಾರ್ಮಿಕ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಕಾರ್ಪೊರೇಟ್ ಪರವಾಗಿ ಬದಲಿಸಲಾಗುತ್ತಿರುವುದು ಖಂಡನೀಯ ಎಂದರು.

ರೈತ, ಕಾರ್ಮಿಕರ ಹಿತ ಕಾಪಾಡಬೇಕಿದ್ದ ಸರಕಾರ ಅಂಬಾನಿ-ಅದಾನಿಗಳ ಹಿತ ಕಾಯುವಲ್ಲಿ ನಿರತವಾಗಿದೆ. ಬಡವರ ಆದಾಯ ದಿನದಿಂದ ದಿನಕ್ಕೆ ಕುಸಿಯುತ್ತಿದ್ದರೂ ಶ್ರೀಮಂತ ಕಾರ್ಪೊರೇಟ್‌ಗಳ ಆದಾಯ ದ್ವಿಗುಣಗೊಳ್ಳುತ್ತಿದೆ ಎಂದರು.

ಐಎನ್‌ಟಿಯುಸಿ ದಿನಕರ ಶೆಟ್ಟಿ ಮಾತನಾಡಿ, ಸಂಸದರು ಮತ್ತು ಶಾಸಕರು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ರಸ್ತೆಗಳ ಸರ್ಕಲ್‌ಗಳ ಹೆಸರುಗಳ ಬಗ್ಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.

ಬ್ಯಾಂಕ್ ಉದ್ಯೋಗಿಗಳ ಮುಖಂಡ ವಿನ್ಸೆಂಟ್ ಡಿಸೋಜ, ಎಐಸಿಸಿಟಿಯುನ ಭರತ್, ಎಐಬಿಒಎನ ರಾಘವ, ಬಿಇಫ್‌ಐನ ಬಿ.ಎಂ. ಮಾಧವ, ರೈತಸಂಘದ ರವಿಕಿರಣ ಪೂಣಚ್ಚ ಮಾತನಾಡಿದರು.

ಜೆಸಿಟಿಯುನ ಜಿಲ್ಲಾ ಸಂಚಾಲಕ ಎಚ್.ವಿ. ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಿಐಟಿಯುನ ಜಯಂತಿ ಶೆಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಮುಂದಾಳುಗಳಾದ ವಿ.ಕುಕ್ಯಾನ್, ಕರುಣಾಕರ ಮಾರಿಪಳ್ಳ, ವಸಂತ ಆಚಾರಿ, ವಾಸುದೇವ ಉಚ್ಚಿಲ, ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಸತೀಶ್, ಮನೋಹರ ಶೆಟ್ಟಿ, ಬೊಂಡಾಲ ಚಿತ್ತರಂಜನ ಶೆಟ್ಟಿ, ವಿನೋದ್ ರಾಜ್, ಫಣೀಂದ್ರ, ಸುರೇಶ್ ಹೆಗ್ಡೆ, ಪುಷ್ಪರಾಜ್, ಸುಲೋಚನಾ, ಕೃಷ್ಣಪ್ಪ, ಪುರುಶೋತ್ತಮ, ಸುನಿಲ್ ರಾಜ್, ರಾಘವೇಂದ್ರ ರಾವ್ ಮುಂತಾದವರು ಉಪಸ್ಥಿತರಿ ದ್ದರು. ಪ್ರದರ್ಶನದಲ್ಲಿ 250ಕ್ಕೂ ಮಿಕ್ಕಿದ ಕಾರ್ಮಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News