ಚುನಾವಣೆಯಲ್ಲಿ ಬೈಡನ್ ಗೆಲುವಿಗಾಗಿ ಅವ್ಯವಹಾರ: ಆರೋಪ ಪುನರುಚ್ಚರಿಸಿದ ಟ್ರಂಪ್

Update: 2020-11-26 18:19 GMT

ವಾಶಿಂಗ್ಟನ್, ನ. 26: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲ್ಲಲು ಸಾಧ್ಯವಾಗುವಂತೆ ನವೆಂಬರ್ 3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ದೇಶದ ಅಧ್ಯಕ್ಷ ಹಾಗೂ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬುಧವಾರ ಮತ್ತೊಮ್ಮೆ ಆರೋಪಿಸಿದ್ದಾರೆ. ಅದೇ ವೇಳೆ, ಚುನಾವಣೆಯ ಫಲಿತಾಂಶವನ್ನು ರದ್ದುಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅವರು ತನ್ನ ಬೆಂಬಲಿಗರನ್ನು ಒತ್ತಾಯಿಸಿದ್ದಾರೆ.

ಪೆನ್ಸಿಲ್ವೇನಿಯ ರಾಜ್ಯದಲ್ಲಿರುವ ರಿಪಬ್ಲಿಕನ್ ಪಕ್ಷದ ಬೆಂಬಲಿಗರೊಂದಿಗೆ ಫೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ‘‘ಚುನಾವಣೆಯ ಫಲಿತಾಂಶವನ್ನು ರದ್ದುಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು’’ ಎಂದು ಹೇಳಿದರು.

ಬೈಡನ್ ನಿರ್ಣಾಯಕವಾಗಿ ಗೆದ್ದ ಮೂರು ವಾರಗಳ ಬಳಿಕವೂ ಟ್ರಂಪ್ ತನ್ನ ಆರೋಪಗಳನ್ನು ಪುನರುಚ್ಚರಿಸುತ್ತಾ ಬಂದಿದ್ದಾರೆ.

ತನ್ನ ವಿರುದ್ಧ ಪಿತೂರಿ ಮಾಡಲಾಗಿದೆ ಎಂಬ ಆರೋಪಗಳನ್ನು ಅವರು ಪುನರುಚ್ಚರಿಸಿದರು. ಆದರೆ, ಈ ಎಲ್ಲ ಆರೋಪಗಳನ್ನು ದೇಶಾದ್ಯಂತದ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ.

ಫಲಿತಾಂಶ ಬುಡಮೇಲು ಯತ್ನಗಳನ್ನು ಅಮೆರಿಕನ್ನರು ಸಹಿಸುವುದಿಲ್ಲ: ಬೈಡನ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬುಡಮೇಲುಗೊಳಿಸಲು ನಡೆಸಲಾಗುತ್ತಿರುವ ಪ್ರಯತ್ನಗಳನ್ನು ಅವೆುರಿಕನ್ನರು ಸಹಿಸುವುದಿಲ್ಲ ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಬುಧವಾರ ಎಚ್ಚರಿಸಿದ್ದಾರೆ.

‘‘ಅಮೆರಿಕನ್ನರು ಸಂಪೂರ್ಣ ನ್ಯಾಯೋಚಿತ ಹಾಗೂ ಮುಕ್ತ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ ಹಾಗೂ ಅದರ ಫಲಿತಾಂಶವನ್ನು ನಾವು ಗೌರವಿಸುತ್ತೇವೆ’’ ಎಂದು ತನ್ನ ತವರು ನಗರ ವಿಲ್ಮಿಂಗ್ಟನ್‌ನಲ್ಲಿ ‘ಥ್ಯಾಂಕ್ಸ್‌ಗಿವಿಂಗ್’ ಆಚರಣೆಯ ಮುನ್ನಾ ದಿನ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

‘‘ಈ ದೇಶದ ಜನರು ಮತ್ತು ಕಾನೂನುಗಳು ಫಲಿತಾಂಶವನ್ನು ಬುಡವೇಲುಗೊಳಿಸುವ ಪ್ರಯತ್ನಗಳನ್ನು ಸಹಿಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News