‘ಲಷ್ಕರ್, ತಾಲಿಬಾನ್ ಪರ ಗೋಡೆಬರಹ' ಜಿಲ್ಲೆಯ ಶಾಂತಿ ಕದಡುವ ಪ್ರಯತ್ನ : ಪಾಪ್ಯುಲರ್ ಫ್ರಂಟ್

Update: 2020-11-27 10:59 GMT

ಮಂಗಳೂರು : ಬಿಜೈ ರಸ್ತೆಯ ಗೋಡೆಯೊಂದರಲ್ಲಿ ‘ಲಷ್ಕರ್, ತಾಲಿಬಾನ್’ ಪರವಾದ ಘೋಷಣೆಗಳು ಕಂಡು ಬಂದಿದ್ದು, ಇದು ಜಿಲ್ಲೆಯ ಶಾಂತಿ ಕದಡುವ ಪ್ರಯತ್ನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸಾಮರಸ್ಯ ಕೆಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಜಾನುವಾರು ವ್ಯಾಪಾರಿಗಳ ಮೇಲೆ ಹಲ್ಲೆ, ಮುಸ್ಲಿಮ್ ಯುವಕರ ಹತ್ಯಾ ಯತ್ನ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗಿವೆ. ಆದರೂ ಮುಸ್ಲಿಮ್ ಸಮಾಜವು ಯಾವುದೇ ಪ್ರಚೋದನೆಗೊಳಗಾದೆ ಇದಕ್ಕೆ ಕಾನೂನಾತ್ಮಕ ಪ್ರತಿಕ್ರಿಯೆಯನ್ನೇ ನೀಡಿದೆ. ಅದೇ ರೀತಿ ಶಾಂತಿ ಕೆಡಿಸಲು ಸಂಘಪರಿವಾರದ ಶಕ್ತಿಗಳು ಸ್ವತಃ ದುಷ್ಕೃತ್ಯಗಳನ್ನು ನಡೆಸಿ ಮುಸ್ಲಿಮರ ತಲೆಗೆ ಕಟ್ಟಲು ವಿಫಲ ಯತ್ನ ನಡೆಸಿದ ಘಟನೆಗಳೂ ಈ ಹಿಂದೆ ರಾಜ್ಯದಲ್ಲಿ ನಡೆದಿವೆ. ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದ ಹಿಂದುತ್ವ ಕೋಮುವಾದಿ ಶಕ್ತಿಗಳು ಆತಂಕವನ್ನು ಸೃಷ್ಟಿಸಿದ್ದವು. ಕೆಲ ತಿಂಗಳ ಹಿಂದೆ ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಮೇಲೆ ಮುಸ್ಲಿಮರ ನೇತೃತ್ವದ ಪಕ್ಷವೊಂದರ ಧ್ವಜ ಹಾರಿಸಲಾಗಿದೆ ಎಂದು ಕೋಲಾಹಲ ಎಬ್ಬಿಸಿ ಕೋಮು ಸಾಮರಸ್ಯಕ್ಕೆ ಭಂಗ ಉಂಟು ಮಾಡುವ ಪ್ರಯತ್ನ ನಡೆದಿತ್ತು. ಆದರೆ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಮುಸ್ಲಿಮರ ವಿರುದ್ಧ ಅಪನಂಬಿಕೆ ಸೃಷ್ಟಿಸುವ ಸಂಘಪರಿವಾರದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು.

ಇದೀಗ ಮಂಗಳೂರಿನಲ್ಲಿ ನಡೆದಿರುವ ಘಟನೆಯಲ್ಲೂ ಇದೇ ರೀತಿಯ ಸಂಶಯ ವ್ಯಕ್ತವಾಗುತ್ತಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಂವಿಧಾನವೇ ಅವಕಾಶ ಕಲ್ಪಿಸಿರುವಾಗ, ಈ ನಾಡಿನ ಜನತೆಗೆ ಹೊರಗಿನ ಯಾವುದೇ ವಿಚ್ಛಿದ್ರಕಾರಿ ಶಕ್ತಿಗಳ ಅಗತ್ಯ ಬೀಳಲಾರದು. ಪೊಲೀಸರು ಸೂಕ್ತ ತನಿಖೆ ನಡೆಸಿ ಈ ಘಟನೆಯ ಹಿಂದಿನ ನೈಜ ಶಕ್ತಿಗಳನ್ನು ಹಾಗೂ ಅದರ ಹಿಂದಿನ ದುರುದ್ದೇಶವನ್ನು ಬಹಿರಂಗಪಡಿಸಬೇಕು. ಅದೇ ರೀತಿ ಜಿಲ್ಲೆಯ ಶಾಂತಿಪ್ರಿಯ ಜನತೆ ದೇಶದ ಸಾರ್ವಭೌಮತೆಗೆ ಮತ್ತು ಅಖಂಡತೆಗೆ ತೊಡಕಾಗುವ ದುಷ್ಟ ಶಕ್ತಿಗಳ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಬೇಕೆಂದು ಇಜಾಝ್ ಅಹ್ಮದ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News