ಐಎಫ್‍ಎಸ್ ಅಧಿಕಾರಿಯ ಭಾರೀ ಮೌಲ್ಯದ ಅಕ್ರಮ ಸಂಪತ್ತು ಪತ್ತೆಹಚ್ಚಿದ ವಿಜಿಲೆನ್ಸ್ ತಂಡ

Update: 2020-11-27 10:59 GMT
ಸಾಂದರ್ಭಿಕ ಚಿತ್ರ

ಭುಬನೇಶ್ವರ್: 1987 ಬ್ಯಾಚಿನ ಐಎಫ್‍ಎಸ್ ಅಧಿಕಾರಿಯೊಬ್ಬರ ನಿವಾಸ, ಅವರ ಒಡೆತನದ ಕಟ್ಟಡಗಳ ಮೇಲೆ 150 ಮಂದಿ ವಿಜಿಲೆನ್ಸ್ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, 20 ಕೋಟಿ ರೂ.ಗೂ ಅಧಿಕ ಅಕ್ರಮ ಸಂಪತ್ತು ಪತ್ತೆ ಹಚ್ಚಿದೆ.

ಪ್ರಾಯಶಃ ವಿಜಿಲೆನ್ಸ್ ಇತಿಹಾಸದಲ್ಲಿಯೇ ಇಷ್ಟೊಂದು ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭುಬನೇಶ್ವರ್ ಹೊರತಾಗಿ ಪುಣೆ, ಮುಂಬೈ, ಖಗಾರಿಯಾ ಮತ್ತು ಉದಯಪುರ್‍ನಲ್ಲಿ ಅಭಯ್ ಕಾಂತ್ ಪಾಠಕ್ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ಅಧಿಕಾರಿ  ಸುಮಾರು 20 ಚಾರ್ಟರ್ಡ್ ವಿಮಾನ ಸೇವೆಗೆ ಲಾಕ್ ಡೌನ್ ವೇಳೆ ರೂ 3 ಕೋಟಿ ವ್ಯಯಿಸಿದ್ದರಲ್ಲದೆ ಪುಣೆಯಲ್ಲಿ ಫ್ಲ್ಯಾಟ್ ಮತ್ತು ಫಾರ್ಮ್ ಹೌಸ್ ಒಂದನ್ನು ಮಾಸಿಕ ರೂ 5 ಲಕ್ಷ ಬಾಡಿಗೆಗೆ ತನ್ನ ಪುತ್ರನಿಗಾಗಿ ಪಡೆದಿದ್ದರು. ಅವರು ಹಲವಾರು ಐಷಾರಾಮಿ ಕಾರುಗಳ ಒಡೆಯರೂ ಆಗಿದ್ದಾರೆ.

ಈ ಅಧಿಕಾರಿ ಹೊಂದಿದ್ದ ಅಕ್ರಮ ಸಂಪತ್ತಿನ ನಿಖರ ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ. ಪಾಠಕ್ ಮತ್ತವರ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದುಕೊಂಡು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯ ಅರಣ್ಯ ಇಲಾಖೆಯಲ್ಲಿ ಜೂನ್ 2018ರಿಂದ ಅವರು ಅರಣ್ಯೀಕರಣ ಮತ್ತು ಯೋಜನೆ ವಿಭಾಗದಲ್ಲಿ ಹೆಚ್ಚುವರಿ ಪಿಸಿಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಮಾಸಿಕ 2.7 ರೂ. ಲಕ್ಷ ವೇತನ ಪಡೆಯುತ್ತಿದ್ದ ಈ ಅಧಿಕಾರಿ ಭುಬನೇಶ್ವರದಲ್ಲಿ 8000 ಚದರ ಅಡಿ ವಿಸ್ತೀರ್ಣದ ಅಪಾರ್ಟ್‍ಮೆಂಟ್ ಹೊಂದಿದ್ದರು. ದಾಳಿ ವೇಳೆ ದಂತ ವೈದ್ಯನಾಗಿರುವ ಈ ಅಧಿಕಾರಿಯ ಸೋದರಳಿಯ ಹಾಗೂ ಚಾಲಕನಿಂದ ಕ್ರಮವಾಗಿ ರೂ 50 ಲಕ್ಷ ಹಾಗೂ ರೂ 20 ಲಕ್ಷ ವಶಪಡಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News