'ಉಗ್ರರ ಪರ ಗೋಡೆ ಬರಹ' ತನಿಖೆಗೆ ಪ್ರತ್ಯೇಕ ತಂಡ ರಚನೆ: ಕಮಿಷನರ್ ವಿಕಾಸ್ ‌ಕುಮಾರ್

Update: 2020-11-27 14:05 GMT

ಮಂಗಳೂರು, ನ. 27: ನಗರದ ಬಿಜೈ ಸಮೀಪದ ಅಪಾರ್ಟ್‌ಮೆಂಟ್‌ವೊಂದರ ಗೋಡೆ ಮೇಲೆ ಮಂಗಳೂರಿಗೆ ಉಗ್ರರನ್ನು ಕರೆಸುವ ಕುರಿತ ಬೆದರಿಕೆಯ ಬರಹವೊಂದು ಕಂಡುಬಂದಿದ್ದು, ಘಟನೆಯ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ತ್ವರಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆ ಸಮೀಪ ಈ ಬರಹ ಶುಕ್ರವಾರ ಕಂಡು ಬಂದಿದೆ. ಗುರುವಾರ ತಡರಾತ್ರಿಯಿಂದ ಶುಕ್ರವಾರ ನಸುಕಿನ ಜಾವದೊಳಗೆ ದುಷ್ಕರ್ಮಿಗಳು ಇದು ಬರೆದಿರುವ ಸಾಧ್ಯತೆ ಇದೆ.

ಕಂಪೌಂಡ್ ಮೇಲೆ ‘ಲಷ್ಕರ್ ಇ ತೊಯ್ಬ ಝಿಂದಾಬಾದ್’ ಎಂದು ಬರೆಯಲಾಗಿದ್ದು, ಉಗ್ರರನ್ನು ಮಂಗಳೂರಿಗೆ ಕರೆಸುವ ಬೆದರಿಕೆ ಹಾಕಲಾಗಿದೆ. ಸಂಘಪರಿವಾರಕ್ಕೆ ಬೆದರಿಕೆಯ ಮಾತುಗಳನ್ನು ಬರೆಯಲಾಗಿದೆ. ‘ನಿಮ್ಮನ್ನು (ಸಂಘ ಪರಿವಾರ) ನಿಯಂತ್ರಿಸಲು ಲಷ್ಕರ್ ಉಗ್ರರನ್ನು ಆಹ್ವಾನಿಸಬೇಕಾದೀತು. ಉಗ್ರರನ್ನು ಆಹ್ವಾನಿಸುವಂತೆ ಮಾಡಬೇಡಿ’ ಎಂದು ಆಂಗ್ಲ ಭಾಷೆಯಲ್ಲಿ ಕಪ್ಪು ಮಸಿಯಲ್ಲಿ ಬರೆಯಲಾಗಿದೆ.

ವಿಷಯ ತಿಳಿದ ಕುತೂಹಲಿಗರು ಸ್ಥಳದಲ್ಲಿ ಜಮಾಯಿಸಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ವಿವಾದಾತ್ಮಕ ಬರಹದ ಮೇಲೆ ಪೈಂಟ್ ಬಳಿದು ಜನತೆಯ ಆತಂಕ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ನಡೆದ ಸಮೀಪ ರಸ್ತೆಯ ಸುತ್ತಮುತ್ತ ಸಿ.ಸಿ. ಕ್ಯಾಮೆರಾಗಳಿದ್ದು, ಅದರಲ್ಲಿ ಘಟನೆಯ ದೃಶ್ಯಾವಳಿ ದಾಖಲಾಗಿರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ತ್ವರಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಉಗ್ರರ ಪರವಾದ ಬರಹ ಇದೇ ಮೊದಲ ಬಾರಿಗೆ ಕಂಡುಬಂದಿದೆ. ಈ ಹಿಂದೆ ನಕ್ಸಲ್ ಪರ ಬರಹಗಳು ಪತ್ತೆಯಾಗಿದ್ದವು. ಆದರೆ ಯಾರು ಬರೆದವರು ಎಂಬುದು ಪತ್ತೆಯಾಗಿರಲಿಲ್ಲ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News