ಉಗ್ರರ ಪರ ಗೋಡೆಬರಹ, ಬಿಜೆಯ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ: ಡಿವೈಎಫ್‌ಐ ಆರೋಪ

Update: 2020-11-27 13:57 GMT

ಮಂಗಳೂರು, ನ.27: ನಗರದ ಕದ್ರಿ ಪೊಲೀಸ್ ಠಾಣೆಯ ಸಮೀಪದ ಗೋಡೆಯೊಂದರಲ್ಲಿ ಲಷ್ಕರ್ ತೊಯಿಬಾ, ತಾಲಿಬಾನ್ ಪರ ಘೋಷಣೆಗಳು ಪ್ರತ್ಯಕ್ಷಗೊಂಡಿರುವುದು ಆತಂಕಕಾರಿ ವಿದ್ಯಮಾನ. ಇದು ನಗರದ ನಾಗರಿಕರಲ್ಲಿ ಆತಂಕ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ. ಸಮಾಜದ ನೆಮ್ಮದಿಗೆ ಕಂಟಕವಾಗಿರುವ ಈ ಕೃತ್ಯ ಬಿಜೆಪಿ ಆಡಳಿತದ ವೈಫಲ್ಯವನ್ನು ಎತ್ತಿತೋರಿಸುತ್ತ ಎಂದು ಡಿವೈಎಫ್‌ಐ ತೀವ್ರವಾಗಿ ಖಂಡಿಸಿದೆ.

ಇಂತಹ ಹೀನ ಕೃತ್ಯ ಎಸಗಿರುವ ಸಮಾಜಘಾತುಕ ಶಕ್ತಿಗಳನ್ನು ತಕ್ಷಣವೇ ಬಂಧಿಸಿ ಕೃತ್ಯದ ಹಿಂದಿನ ಹುನ್ನಾರಗಳನ್ನು ಬಯಲಿಗೆಳೆಯಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿ, ಪೊಲೀಸ್ ಠಾಣೆಯ ಕಣ್ಣಳತೆಯ ದೂರದಲ್ಲಿ ಇಂತಹ ಗೋಡೆಬರಹ ಪ್ರತ್ಯಕ್ಷಗೊಂಡಿರುವುದು ಹಲವು ಅನುಮಾನ ಗಳಿಗೆ ಕಾರಣವಾಗಿದೆ. ಪೊಲೀಸ್ ವೈಫಲ್ಯವನ್ನೂ ಎತ್ತಿ ತೋರಿಸುತ್ತದೆ. ಕೋಮು ಸೂಕ್ಷ್ಮ ಮಂಗಳೂರಿನಲ್ಲಿ ಇದು ಶಾಂತಿ ಕದಡುವ ಉದ್ದೇಶ ವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಉದ್ಯೋಗ, ಆರೋಗ್ಯ, ಶಿಕ್ಷಣ ಹೀಗೆ ತಮ್ಮ ದೈನಂದಿನ ಬದುಕಿನ ಹಲವು ಸಮಸ್ಯೆಗಳಿಂದ ಜನತೆ ಕಂಗೆಟ್ಟಿರುವ ಪ್ರಸಕ್ತ ಸಂದರ್ಭದಲ್ಲಿ ಈ ರೀತಿಯ ಪ್ರಚೋದನಾಕಾರಿ ಕೃತ್ಯ ಜನರ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದಲೂ ನಡೆದಿರಬಹುದು. ಒಟ್ಟಾರೆಯಾಗಿ ಈ ಬರಹ ಭಿನ್ನ ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಡಳಿತ ಹಳಿ ತಪ್ಪಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕ್ರಿಮಿನಲ್ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಲಷ್ಕರ್ ಪರ ಗೋಡೆಬರಹವೂ ಬಿಜೆಪಿ ಆಡಳಿತ ವೈಫಲ್ಯದ ನೇರ ಪರಿಣಾಮವಾಗಿದೆ.

ಪೊಲೀಸ್ ಇಲಾಖೆ ತಕ್ಷಣವೇ ತಾಲಿಬಾನ್, ಲಷ್ಕರ್ ಪರ ಗೋಡೆ ಬರಹದ ಬರೆದ ಆರೋಪಿಗಳನ್ನು ಬಂಧಿಸಬೇಕು. ಕೃತ್ಯದ ಹಿಂದಿನ ಹುನ್ನಾರಗಳನ್ನು ಬಯಲಿಗೆ ತರಬೇಕು. ಇಲ್ಲದಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News