ಸಿದ್ದರಾಮಯ್ಯ ಸರಕಾರ ಉಳಿದದ್ದೆ ಡ್ರಗ್ಸ್ ಮಾಫಿಯಾದಿಂದ : ನಳಿನ್ ಕುಮಾರ್ ಗಂಭೀರ ಆರೋಪ

Update: 2020-11-27 14:21 GMT

ಉಡುಪಿ, ನ. 27: ಈ ಹಿಂದಿನ ಸಿದ್ದರಾಮಯ್ಯ ಸರಕಾರ ಉಳಿದದ್ದೆ ಡ್ರಗ್ಸ್ ಮಾಫಿಯಾದಿಂದ. ಇದರಿಂದಲೇ ಅವರು ಐದು ವರ್ಷಗಳ ಕಾಲ ಸರಕಾರ ನಡೆಸಿರುವುದು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಡ್ರಗ್ಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಲಾದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಲವ್ ಜಿಹಾದ್ ವಿರುದ್ಧ ಸರಕಾರ ಕಠಿಣ ಕಾನೂನು ತರಲು ತೀರ್ಮಾನ ಮಾಡಿದೆ. ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಸಾಕಷ್ಟು ಮಂದಿ ಸಂಘಪರಿವಾರದ ಕಾರ್ಯಕರ್ತರು ಹಾಗೂ ಮುಖಂಡರ ಹತ್ಯೆಗಳು ನಡೆದಿದ್ದವು. ಆದರೆ ನಮ್ಮ ಸರಕಾರದ ಈ ಒಂದೂವರೆ ಅವಧಿಯಲ್ಲಿ ಒಂದೇ ಒಂದು ಮತೀಯ ಗಲಭೆಗಳು ಮತ್ತು ಹತ್ಯೆಗಳು ನಡೆದಿಲ್ಲ ಎಂದರು.

ರಾಜ್ಯದಲ್ಲಿರುವ 5808 ಗ್ರಾಪಂಗಳಲ್ಲಿ 96 ಸಾವಿರ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಇದರಲ್ಲಿ ಶೇ.80ರಷ್ಟು ಗೆಲುವು ಸಾಧಿಸುವುದು ಪಕ್ಷದ ಗುರಿಯಾಗಿದೆ. ಗಾಂಧಿಯ ಗ್ರಾಮ ಸ್ವರಾಜ್ಯ, ಮೋದಿಯ ಆದರ್ಶ ಗ್ರಾಮ ಮತ್ತು ಸಾಮಾನ್ಯ ಕಾರ್ಯಕರ್ತನನ್ನು ನಾಯಕನ್ನಾಗಿಸುವುದೇ ಪಕ್ಷದ ಮುಖ್ಯ ಉದ್ದೇಶವಾಗಿದೆ ಎಂದರು.

ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಮಾತನಾಡಿ, ಕೇವಲ ತುಷ್ಟೀಕರಣದ ರಾಜಕೀಯ ಮಾಡಿದ್ದ ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯನ್ನೇ ಮರೆತು ಬಿಟ್ಟಿತ್ತು. ಅದೇ ರೀತಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಿದೆ. ಈ ಮಧ್ಯೆ ಜನರ ಅಪೇಕ್ಷೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಸಂಸದರಾದ ಮುನಿಸ್ವಾಮಿ, ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್ ಮಾತನಾಡಿದರು. ಮುಲ್ಕಿ ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್, ಮುಖಂಡರಾದ ಮಹೇಶ್ ತೆಂಗಿನಕಾಯಿ, ಮಟ್ಟಾರು ರತ್ನಾಕರ ಹೆಗ್ಡೆ, ದಿನಕರ ಬಾಬು, ಗೀತಾ ವಿವೇಕಾನಂದ, ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಅಧ್ಯಕ್ಷೆ ಮಹೇಶ್ ಠಾಕೂರ್ ಸ್ವಾಗತಿಸಿದರು. ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿ ಗ್ರಾಪಂಗೆ ಕೋಟಿ ಅನುದಾನ

ಪ್ರತಿಯೊಂದು ಗ್ರಾಪಂಗಳಿಗೂ ಒಂದು ಕೋಟಿ ರೂ. ಅನುದಾನ ನೀಡಲು ನರೇಂದ್ರ ಮೋದಿ ಸಂಕಲ್ಪ ಮಾಡಿದ್ದಾರೆ. ನರೇಗಾ ಯೋಜನೆಯಲ್ಲಿ ಗ್ರಾಪಂ ಗಳಿಗೆ ನೇರ ಅನುದಾನ ಒದಗಿಸುವುದು ಸರಕಾರದ ಉದ್ದೇಶವಾಗಿದೆ. ಗ್ರಾಪಂ ಗಳಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಇದರಿಂದ ಗ್ರಾಪಂ ಅಧ್ಯಕ್ಷರು ಕೂಡ ಪ್ರಧಾನ ಮಂತ್ರಿಯಷ್ಟೆ ಫವರ್‌ಫುಲ್ ಆಗಲಿದ್ದಾರೆ. ಹೀಗೆ ಗ್ರಾಪಂಗಳಲ್ಲಿ ಶಕ್ತಿಯುತ ಆಡಳಿತ ನೀಡುವ ಪರಿಕಲ್ಪನೆ ಬಿಜೆಪಿ ಪಕ್ಷದ್ದಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಕೇಂದ್ರ ಸರಕಾರ ಒಂದು ವರ್ಷ ಅವಧಿಯಲ್ಲಿ ಉಡುಪಿ ಜಿಲ್ಲೆಯ ಜಿಪಂ ಹಾಗೂ ಗ್ರಾಪಂಗಳಿಗೆ ಸುಮಾರು 80ಕೋಟಿ ರೂ. ಅನುದಾನವನ್ನು ಒದಗಿಸಿದೆ. ಮುಂದಿನ ಒಂದು ವರ್ಷದೊಳಗೆ ಕುಮ್ಕಿ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಭೂಮಿ ಕೊಡಲು ಸರಕಾರ ಸಂಕಲ್ಪ ಮಾಡಿದೆ. ಕರಾವಳಿಗೆ ಪ್ರತ್ಯೇಕ ಮರಳು ನೀತಿಯನ್ನು ಜಾರಿಗೆ ತಂದು ಸ್ಯಾಂಡ್ ಮಾಫಿಯಾವನ್ನು ನಿಯಂತ್ರಿಸಲು ಸರಕಾರ ಕಟಿಬದ್ಧವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News