ಪ್ರಸಾದ್ ಪುರೋಹಿತ್ ಮನವಿಯ ಮಧ್ಯಪ್ರವೇಶಿಸಲು ಸಂತ್ರಸ್ತನ ತಂದೆಗೆ ಕೋರ್ಟ್ ಅನುಮತಿ

Update: 2020-11-27 14:41 GMT

ಮುಂಬೈ, ನ. 27: ಬಾಂಬ್ ಸ್ಫೋಟ ಪ್ರಕರಣದಲ್ಲಿ ತನ್ನನ್ನು ವಿಚಾರಣೆಗೆ ಒಳಪಡಿಸುತ್ತಿರುವುದನ್ನು ಪ್ರಶ್ನಿಸಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸಲ್ಲಿಸಿದ ಮನವಿ ವಿರೋಧಿಸಲು ಹಾಗೂ ಮಧ್ಯಪ್ರವೇಶಿಸಲು 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಸಂತ್ರಸ್ತನ ತಂದೆ ನಿಸಾರ್ ಅಹ್ಮದ್ ಹಾಜಿ ಸೈಯದ್ ಬಿಲಾಲ್‌ಗೆ ಬಾಂಬೆ ಉಚ್ಚ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಹಾಗೂ ಎಂ.ಎಸ್. ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಬಿಲಾಲ್ ಅವರಿಗೆ ಮಧ್ಯಪ್ರವೇಶಿಸಲು ಅನುಮತಿ ನೀಡಿದೆ. 2008 ಸೆಪ್ಟಂಬರ್ 29ರಂದು ಮಾಲೆಗಾಂವ್‌ನಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಬಿಲಾಲ್ ಅವರ ಪುತ್ರ ಮೃತಪಟ್ಟಿದ್ದ. ಈ ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದರು ಹಾಗೂ 101 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ತಂಡ 2008 ಅಕ್ಟೋಬರ್ 23ರಂದು ಮೊದಲಿಗೆ ಸಾಧ್ವಿ ಹಾಗೂ ಅವರ ಇಬ್ಬರು ಸಹವರ್ತಿಗಳನ್ನು ಬಂಧಿಸಿತ್ತು.

ತನಿಖೆ ಪೂರ್ಣಗೊಳಿಸಿದ ಬಳಿಕ 2009 ಜನವರಿ 20ರಂದು ಆರೋಪ ಪಟ್ಟಿ ಸಲ್ಲಿಸಿತ್ತು. ಎರಡು ತಿಂಗಳುಗಳ ಬಳಿಕ 2011 ಎಪ್ರಿಲ್ 1ರಂದು ಈ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು. ಸೇನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಸಂಬಂಧಿಸಿ ತನ್ನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆದರೆ, ತನ್ನನ್ನು ಕ್ರಿಮಿನಲ್ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಸಮರ್ಪಕ ಸಿಂಧುತ್ವ ಇರುವ ಅನುಮೋದನೆ ಇಲ್ಲ ಎಂದು ಆರೋಪಿಸಿ ಪುರೋಹಿತ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

 ಈ ಹಿನ್ನೆಲೆಯಲ್ಲಿ ಪುರೋಹಿತ್ ಅವರ ಮನವಿ ವಿರೋಧಿಸಲು ಹಾಗೂ ಮಧ್ಯಪ್ರವೇಶಿಸಲು ಅವಕಾಶ ನೀಡುವಂತೆ ಕೋರಿ ಬಿಲಾಲ್ ಅವರು ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರೋಹಿತ್ ಪರ ವಕೀಲ ನೀಲಾ ಗೋಖಲೆ ವಿರೋಧಿಸಿದ್ದರು. ಆದರೆ, ಬಿಲಾಲ್ ಅವರ ಪ್ರತಿಪಾದನೆಯನ್ನು ಒಪ್ಪಿದ ಉಚ್ಚ ನ್ಯಾಯಾಲಯ, ಪುರೋಹಿತ್ ಅರ್ಜಿಯ ಮಧ್ಯೆ ಪ್ರವೇಶಿಸಲು ಅನುಮತಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News