ಉಡುಪಿ ಶ್ರೀಕೃಷ್ಣ ಮಠದಲ್ಲಿ ತೆಪ್ಪೋತ್ಸವ, ಲಕ್ಷದೀಪೋತ್ಸವ ಆರಂಭ

Update: 2020-11-27 16:03 GMT

ಉಡುಪಿ, ನ.27: ಉಡುಪಿ ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ಉತ್ಥಾನ ದ್ವಾದಶಿಯಂದು ಸಂಭ್ರಮದ ತೆಪ್ಪೋತ್ಸವ ಹಾಗೂ ಲಕ್ಷ ದೀಪೋತ್ಸವದೊಂದಿಗೆ ರಥೋತ್ಸವ ಆರಂಭಗೊಂಡಿತು.

ಇದರೊಂದಿಗೆ ಒಂದು ತಿಂಗಳಿಂದ ಮಠದಲ್ಲಿ ನಡೆಯುತ್ತಿದ್ದ ಪಶ್ಚಿಮ ಜಾಗರಪೂಜೆ ಸಂಪನ್ನಗೊಂಡಿತು. ಪರ್ಯಾಯ ಅದಮಾರು ಶ್ರೀಈಶ ಪ್ರಿಯತಿ ತೀರ್ಥ ಸ್ವಾಮೀಜಿ ಮುಂಜಾನೆ ಮಹಾಪೂಜೆ, ನಂತರ ತುಳಸಿ ಪೂಜೆಯನ್ನು ನೆರವೇರಿಸಿದರು. ಮಧ್ಯಾಹ್ನ 3.30ಕ್ಕೆ ಪರ್ಯಾಯ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ನೇತೃತ್ವ ದಲ್ಲಿ ವಿವಿಧ ಮಠಾಧೀಶರು ರಥಬೀದಿಯಲ್ಲಿ ಹಣತೆ ಮುಹೂರ್ತ ನೆರವೇರಿಸಿದರು. ಸಂಜೆ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ವಿವಿಧ ಮಠಾ ಧೀಶರು ಪೂಜೆ ಮಾಡಿ, ಕ್ಷೀರಾಬ್ಧಿ ಅರ್ಘ್ಯವನ್ನು ನೀಡಿದರು.

ರಾತ್ರಿ ಪೂಜೆ ನಡೆದು ನಂತರ ಚಾತುರ್ಮಾಸ್ಯ ವ್ರತ ಕಾಲದಲ್ಲಿ ಒಳಗಿದ್ದ ಉತ್ಸವ ಮೂರ್ತಿಯನ್ನು ಹೊರಗೆ ತಂದು ರಾತ್ರಿ ತೆಪ್ಪೋತ್ಸವ ನಡೆಯಿತು. ಅದರ ಬಳಿಕ ರಥಬೀದಿಯಲ್ಲಿ ರಥೋತ್ಸವ ನಡೆಯಿತು. ನವಗ್ರಹ ಪೂಜೆ, ನವಗ್ರಹ ದಾನದ ನಂತರ ರಥೋತ್ಸಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಮಹಾಪೂಜಾ ರಥದಲ್ಲಿ ಅನಂತೇಶ್ವರ ಚಂದ್ರೇಶ್ವರ ದೇವರ ಮೂರ್ತಿ ಮತ್ತು ಗರುಡ ರಥದಲ್ಲಿ ಕೃಷ್ಣ ದೇವರು, ಪ್ರಾಣ ದೇವರ ಮೂರ್ತಿಯನ್ನು ಇಟ್ಟು ಮೆರವಣಿಗೆ ನಡೆಸಲಾಯಿತು.

ಉತ್ಸವದಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾ ಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು.

ರಥಬೀದಿ, ಮಧ್ವ ಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳು ಕಂಗೊಳಿಸಿದವು. ಕೊರೊನಾ ಕಾರಣದಿಂದ ರಥಬೀದಿಯಲ್ಲಿ ಕೆಲವೇ ಸಂಖ್ಯೆ ಯಲ್ಲಿ ಭಕ್ತರು ಸೇರಿದ್ದರು. ಈ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News