ಸ್ವಾತಂತ್ರ್ಯವು ಕೆಲವು ಜನರಿಗೆ ಮಾತ್ರ ಸಿಗುವ ಉಡುಗೊರೆಯಲ್ಲ: ಸುಪ್ರೀಂ ಕೋರ್ಟ್

Update: 2020-11-27 16:07 GMT

ಹೊಸದಿಲ್ಲಿ,ನ.11: ಜನತೆಯ ವೈಯಕ್ತಿಕ ಸ್ವಾತಂತ್ರ್ಯವನ್ನು ಸಂರಕ್ಷಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ನ್ಯಾಯಾಧೀಶರುಗಳಿಗೆ ಸ್ಪಷ್ಟವಾದ ಕರೆ ನೀಡಿದ್ದು, ಸ್ವಾತಂತ್ರ್ಯವೆಂಬುದು ಕೇವಲ ‘‘ಕೆಲವೇ ಮಂದಿಗೆ ಮಾತ್ರವೇ ದೊರೆಯುವ ಉಡುಗೊರೆಯಲ್ಲ’’ ಎಂದು ಹೇಳಿದೆ.

ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್‌ ಟಿವಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ಇತರ ಇಬ್ಬರ ಜಾಮೀನು ಬಿಡುಗಡೆಯ ಅವಧಿಯನ್ನು, ಅವರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಿಲೇವಾರಿ ಮಾಡುವವರೆಗೆ ವಿಸ್ತರಿಸಿ ಆದೇಶ ನೀಡಿದ ಸಂದರ್ಭ ಸುಪ್ರೀಂಕೋರ್ಟ್ ಈ ಆಭಿಪ್ರಾಯ ವ್ಯಕ್ತಪಡಿಸಿದೆ.

 ಹಣ ಮತ್ತಿತರ ಸಂಪನ್ಮೂಲಗಳಿಲ್ಲದ ಕಾರಣ ಹಲವಾರು ಮಂದಿ ಜನಸಾಮಾನ್ಯರು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನ ಮೆಟ್ಟಲೇರಲು ಸಾಧ್ಯವಾಗದೆ, ವಿಚಾರಣಾಧೀನ ಕೈದಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ವಿಷಾದ ವ್ಯಕ್ತಪಡಿಸಿದೆ. ಒಂದೇ ಒಂದು ದಿನ ಅವರನ್ನು ಸ್ವಾತಂತ್ರ್ಯದಿಂದ ವಂಚಿತ ರನ್ನಾಗಿಸುವುದು ತುಂಬಾ ಅಧಿಕವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಹಾಗೂ ಇಂದು ಮಲ್ಹೋತ್ರಾ ಅವರು ಶುಕ್ರವಾರ ನೀಡಿದ ಆದೇಶವೊಂದರಲ್ಲಿ ತಿಳಿಸಿದ್ದಾರೆ.

 ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾಮೀನು ಎಂಬುದು ಮಾನವತೆಯ ಗಂಭೀರವಾದ ಅಭಿವ್ಯಕ್ತಿಯಾಗಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ ಅವರು ಅಭಿಪ್ರಾಯಿಸಿದ್ದಾರೆ. ಆಡಳಿತವು, ಜನಸಾಮಾನ್ಯರನ್ನು ಶೋಷಣೆಗೆ ಒಳಪಡಿಸಲು ಕ್ರಿಮಿನಲ್ ಕಾನೂನನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಕೂಡದು ಎಂದು ಅವರು ಎಚ್ಚರಿಕೆ ನೀಡಿದರು.

 ‘‘ಸ್ವಾತಂತ್ರ್ಯವೆಂಬುದು ನಾಗರಿಕರ ಜಾಗೃತಿಯಿಂದ, ಮಾಧ್ಯಮಗಳ ಗದ್ದಲದಿಂದ ಉಳಿದುಕೊಳ್ಳುತ್ತದೆ. ನ್ಯಾಯಾಲಯದ ಧೂಳು ತುಂಬಿದ ಪಡಸಾಲೆಗಳು ಕಾನೂನಿನ ಪ್ರಭುತ್ವವನ್ನು ಜೀವಂತವಾಗಿಡುತ್ತದೆ. ಆದಾಗ್ಯೂ, ಈ ಅಂಶಗಳಲ್ಲಿ ಯಾವುದಾದರೂ ಒಂದರ ಕೊರತೆ ಉಂಟಾದರೂ ಸ್ವಾತಂತ್ರ್ಯಕ್ಕೆ ಹಾನಿಯಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

 ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚನೆಗೊಳಗಾಗುವುದರಿಂದ ಜನರನ್ನು ರಕ್ಷಿಸಲು ನ್ಯಾಯಾಲಯಗಳು ಮುಂಚೂಣಿಯಲ್ಲಿ ಕಾರ್ಯಾಚರಿಸುತ್ತವೆ. ಆದರೆ ಹಲವಾರು ಮಂದಿ ವಿಚಾರಣಾಧೀನ ಕೈದಿಗಳ ಜಾಮೀನು ಅರ್ಜಿಗಳು ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಅಲೆದಾಡುತ್ತಲೇ ಇರುತ್ತವೆ ಎಂದು ಅವರು ವಿಷಾದಿಸಿರು.

 ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ 91,568 ಜಾಮೀನು ಅರ್ಜಿಗಳು ವಿಚಾರಣೆಗೆ ಬಾಕಿಯುಳಿದಿದ್ದರೆ, 1.96 ಜಾಮೀನು ಅರ್ಜಿಗಳು ಜಿಲ್ಲಾ ನ್ಯಾಯಾಲಯಗಳಲ್ಲಿ ಅಲಿಕೆಗಾಗಿ ಕಾಯುತ್ತಿವೆ ಎಂದು ಚಂದ್ರಚೂಡ್ ಅವರು ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News