ಲವ್ ಜಿಹಾದ್ ಎನ್ನುವುದು ಸುಳ್ಳು ಕಲ್ಪನೆ: ಪ್ರಸಿದ್ಧ ಲೇಖಕ ಚೇತನ್ ಭಗತ್

Update: 2020-11-27 16:31 GMT

ಹೊಸದಿಲ್ಲಿ,ನ.27: ಲವ್ ಜಿಹಾದ್ ಎಂಬುದು ‘ನಗರಪ್ರದೇಶದ ಸುಳ್ಳುಕಲ್ಪನೆಯಾಗಿದ್ದು’, ಅಂಕಿಅಂಶಗಳ ಪ್ರಕಾರ ಹೇಳುವುದಾದರೆ ಅಂತಹದ್ದೇನೂ ನಡೆಯುತ್ತಿಲ್ಲವೆಂದು ಜನಪ್ರಿಯ ಖ್ಯಾತ ಲೇಖಕ ಚೇತನ್ ಭಗತ್ ಹೇಳಿದ್ದ್ಜಾರೆ.

Thewire.in ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಲವ್‌ಜಿಹಾದ್ ಎಂಬುದು ಕೆಲವು ಹಿಂದೂಗಳಲ್ಲಿ ಹುದುಗಿರುವ ಭಯದಿಂದ ಉದ್ಭವಿಸಿದ ಪದವಾಗಿದೆ. ಈ ಕುರಿತ ಆತಂಕಗಳನ್ನು ನಿವಾರಿಸಬೇಕಾದ ಅಗತ್ಯವಿದೆ ಎಂಬುದಾಗಿ ಅಭಿಪ್ರಾಯ ಪಟ್ಟರು. ಅಂತರ್‌ಧರ್ಮಿಯ ವಿವಾಹಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ನಡೆಯುತ್ತಿದ್ದು, ಅವುಗಳಲ್ಲಿ ಕೆಲವು ಪ್ರಕರಣಗಳಲ್ಲಿ ಮಾತ್ರ ಮದುಮಗ ಮುಸ್ಲಿಂ ಆಗಿದ್ದಲ್ಲಿ, ಆಕೆಯ ಕುಟುಂಬಿಕರು ಹುಡುಗಿಯನ್ನು ಇಸ್ಲಾಮ್ ಧರ್ಮ ಸ್ವೀಕರಿಸುವಂತೆ ಸೂಚಿಸಿದ ನಿದರ್ಶನಗಳಿವೆ ಎಂದಿದ್ದಾರೆ.

ಬಲಪಂಥೀಯ ಹಿಂದೂವಾದವು, ಭಾರತದ ಅಭಿವೃದ್ಧಿಯ ಅವಕಾಶಗಳಿಗೆ ಬೆದರಿಕೆಯೊಡ್ಡುತ್ತಿವೆ ಎಂದು ಚೇತನ್ ಭಗತ್ ತಿಳಿಸಿದರು. ‘‘ ಬಲಪಂಥೀಯ ಹಿಂದುತ್ವವಾದಿಗಳು ಗಲಭೆ ಹಾಗೂ ಅಶಿಸ್ತಿನವರಾಗಿದ್ದಾರೆ. ಅವರಿಗೆ ಶಾಶ್ವತವಾದ ಸಂಘರ್ಷ ಬೇಕಿದೆ. ಆಗಾಗ್ಗೆ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಲೇ ಇರುತ್ತಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ ಅವರು ಭಾರತದ ಅಭಿವೃದ್ಧಿಯ ಅವಕಾಶಗಳಿಗೆ ಹಾನಿಯೆಸಗುತ್ತಿದ್ದಾರೆ’’ ಎಂದರು.

ಹಿಂದೂರಾಷ್ಟ್ರವಾಗುವುದರಿಂದ ಭಾರತಕ್ಕೆ ಭವ್ಯವಾದ ಭವಿಷ್ಯ ದೊರೆಯಲಾರದು ಎಂದು ಭಗತ್ ಪ್ರತಿಪಾದಿಸಿದರು. ಹಿಂದೂ ರಾಷ್ಟ್ರವನ್ನು ಸೃಷ್ಟಿಸುವ ಯತ್ನವು ದೇಶದಲ್ಲಿ ಹೂಡಿಕೆ, ಔದ್ಯಮಿಕ ಭಾವನೆ ಹಾಗೂ ಸೌಹಾರ್ದತೆಯನ್ನು ಹದಗೆಡಿಸಲಿದೆ ಎಂದರು.

ಬಲಪಂಥೀಯ ಹಿಂದೂವಾದಿಗಳು ಈ ಸರಕಾರದ ಹೆಸರನ್ನು ನಾಶಪಡಿಸುವಲ್ಲಿ ಸಫಲರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೀಗ ಗೊಂದಲದಲ್ಲಿ ಸಿಲುಕಿದ್ದಾರೆ ಎಂದರು. ಇದೇ ಬಲಪಂಥೀಯರು ಸರಕಾರವು ಚುನಾವಣೆಯಲ್ಲಿ ಗೆಲ್ಲುವಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮೋದಿಯವರಿಗೆ ಅವರ ಬಗ್ಗೆ ಕೃತಜ್ಞತಾ ಭಾವನೆಯಿದೆ. ಹೀಗಾಗಿ ಅವರನ್ನು ಟೀಕಿಸುವುದು ಕೂಡಾ ಪ್ರಧಾನಿಗೆ ಕಷ್ಟಕರವಾಗಿದೆ. ಈ ಬಲಪಂಥೀಯರು ತಾವಾಗಿಯೇ ತಮ್ಮನ್ನು ತಿದ್ದಿಕೊಳ್ಳಬೇಕು ಎಂಬ ಭಾವನೆಯನ್ನು ಮೋದಿ ಹೊಂದಿದ್ದಾರೆ ಎಂದು ‘ಟು ಸ್ಟೇಟ್ಸ್’ ಖ್ಯಾತಿಯ ಕಾದಂಬರಿಕಾರ ಚೇತನ್ ಭಗತ್ ಹೇಳಿದರು.

  ಕೇಂದ್ರ ಸರಕಾರದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ)ಗಳು ಮುಸ್ಲಿಮರ ಬಗ್ಗೆ ಪಕ್ಷಪಾತದಿಂದ ಕೂಡಿದೆಯೆಂದವರು ಹೇಳಿದರು.

   ದೇಶದೊಳಗೆ ನುಸುಳಿರುವ ವಲಸಿಗರನ್ನು ‘ಗೆದ್ದಲು’ಗಳೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿರುವುದಕ್ಕೆ ಚೇತನ ಭಗತ್ ಆಕ್ಷೇಪ ವ್ಯಕ್ತಪಡಿಸಿದರು. ಅಕ್ರಮ ವಲಸಿಗರ ಕಾನೂನು ಸ್ಥಾನಮಾನ ಏನೇ ಇರಲಿ, ಅವರು ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕೊಡುಗೆ ನೀಡಿದ್ದಾರೆಂಬುದು ನಿರಾಕರಿಸಲು ಸಾಧ್ಯವಿಲ್ಲ ಎಂದರು.

‘ಸಬ್‌ಕಾ ಸಾಥ್ ಸಬ್ ಕಾ ವಿಕಾಸ್ ’ಎಂದು ಘೋಷಿಸುವ ಬಿಜೆಪಿಯು ಮುಸ್ಲಿಮರನ್ನು ಅನ್ಯಾಯವಾಗಿ ನಡೆಸಿಕೊಳ್ಳುತ್ತದೆ ಎಂದವರು ಅಸಾಮಾಧಾನ ವ್ಯಕ್ತಪಡಿಸಿದರು. ಬಹುತೇಕ ಹಿಂದೂಗಳು ಮುಸ್ಲಿಮರನ್ನು ಸಮಾನವಾಗಿ ಅಥವಾ ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲವೆಂದು ಭಗತ್ ಬೇಸರಿಸಿದರು. 2014ರ ಚುನಾವಣೆಯ ಬಳಿಕ ಮುಸ್ಲಿಂ ವಿರೋಧಿ ಬಾವನೆಗಳು ಹೆಚ್ಚುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಾಮಾಜಿಕ ಜಾಲತಾಣಗಳ ಬೆಳವಣಿಗೆಗಳು ಇದಕ್ಕೆ ಕಾರಣವಾಗಿರಬಹುದು ಎಂದರು.

 ಭಾರತದ ಉದಾರವಾದಿಗಳು ಭಾರತದ ಜನತೆ ಅರ್ಥವಾಗುವಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಮಾತ್ರವೇ ಬಿಜೆಪಿಗೆ ಪ್ರಬಲವಾದ ಪ್ರತಿಪಕ್ಷವಾಗಲು ಸಾಧ್ಯವೆಂದು ಅವರು ಹೇಳಿದರು. ಪ್ರಜಾತಾಂತ್ರಿಕವಾದ ರೀತಿಯಲ್ಲಿ ತನ್ನ ನಾಯಕನನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಶಕ್ತಿಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದರು.

 ನರೇಂದ್ರ ಮೋದಿಗೆ ಸರಿಸಾಟಿಯಾದಂತಹ ವ್ಯಕ್ತಿಯ ಅಗತ್ಯ ಕಾಂಗ್ರೆಸ್‌ಗಿದ್ದು ಆತ ದೇಶವೇ ಒಪ್ಪಿಕೊಳ್ಳುವಂತಹ ಗುಣ ಹಾಗೂ ಸಾಮರ್ಥ್ಯವನ್ನು ಹೊಂದಿರುವ ಅಗತ್ಯವಿದೆ ಎಂದರು ಚೇತನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News