ರೈತರ ಪ್ರತಿ ಬೇಡಿಕೆ ಬಗ್ಗೆಯೂ ಚರ್ಚೆಗೆ ಸಿದ್ಧ : ಅಮಿತ್ ಶಾ

Update: 2020-11-29 04:01 GMT

ಹೊಸದಿಲ್ಲಿ : ರೈತರ ಪ್ರತಿ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರಾಜಧಾನಿಯ ಹೊರಗೆ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನೀಡಿರುವ ವೀಡಿಯೊ ಸಂದೇಶದಲ್ಲಿ ಅಮಿತ್ ಶಾ ಸರ್ಕಾರದ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.

"ಸರ್ಕಾರ ಪ್ರತಿಭಟನಾನಿರತ ರೈತ ಸಂಘಟನೆಗಳ ಜತೆ ಡಿಸೆಂಬರ್ 3ರಂದು ಮಾತುಕತೆ ನಡೆಸಲಿದೆ; ಅದಕ್ಕೂ ಮೊದಲು ಚರ್ಚೆ ನಡೆಸಲು ಬಯಸಿದರೆ, ಅವರು ಸರ್ಕಾರ ನಿಗದಿಪಡಿಸಿದ ಪ್ರತಿಭಟನಾ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು" ಎಂದು ಹೇಳಿದ್ದಾರೆ.

"ರೈತ ಸಂಘಟನೆಗಳು ಡಿಸೆಂಬರ್ 3ರ ಮೊದಲು ಮಾತುಕತೆ ನಡೆಸಬೇಕು ಎಂದು ಬಯಸಿದರೆ, ನಿಗದಿತ ಸ್ಥಳಕ್ಕೆ ಪ್ರತಿಭಟನೆಯನ್ನು ವರ್ಗಾಯಿಸಬೇಕು ಎಂದು ನಾನೂ ಹೇಳಬಯಸುತ್ತೇನೆ. ಮರುದಿನವೇ ಸರ್ಕಾರ ಮಾತುಕತೆ ನಡೆಸಿ ನಿಮ್ಮ ಆತಂಕಗಳನ್ನು ಬಗೆಹರಿಸಲಿದೆ" ಎಂದು ಶಾ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ದೆಹಲಿ ಚಲೋ ಅಭಿಯಾನದ ಅಂಗವಾಗಿ ಸಾವಿರಾರು ಮಂದಿ ಪಂಜಾಬ್ ರೈತರು ರಾಜಧಾನಿಗೆ ತೆರಳುವ ವೇಳೆ ಅಶ್ರುವಾಯು ಶೆಲ್ ಮತ್ತು ಜಲಫಿರಂಗಿಗಳಿಂದ ಅವರನ್ನು ತಡೆಯಲು ಪೊಲೀಸರು ಪ್ರಯತ್ನ ನಡೆಸಿದ್ದರು. ರೈತರನ್ನು ರಾಜಧಾನಿಯ ಒಳಕ್ಕೆ ಪ್ರವೇಶಿಸಲು ಅವಕಾಶ ನೀಡಿಲ್ಲ. ದೆಹಲಿಯ ಕಾನೂನು- ಸುವ್ಯವಸ್ಥೆ ಹೊಣೆ ಹೊಂದಿರುವ ಕೇಂದ್ರ ಸರ್ಕಾರ ಪ್ರತಿಭಟನೆಗೆ ಸ್ಥಳ ನಿಗದಿಪಡಿಸಿದೆ.

ಆದರೆ ದೆಹಲಿಯ ಹೊರವಲಯದ ಸ್ಥಳಕ್ಕೆ ಪ್ರತಿಭಟನೆಯನ್ನು ಸ್ಥಳಾಂತರಿಸಲು ಪ್ರತಿಭಟನಾಕಾರರು ಒಪ್ಪಿಲ್ಲ. ರಾಜಧಾನಿಯ ಹೊರವಲಯದ ಹಲವು ಕಡೆಗಳಲ್ಲಿ ರೈತರು ಬೀಡು ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News