ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್‌ಗೆ ಮರುನಾಮಕರಣ: ಆದಿತ್ಯನಾಥ್

Update: 2020-11-29 04:29 GMT

ಹೈದರಾಬಾದ್ : ಹೈದರಾಬಾದ್ ಮಹಾನಗರ ಪಾಲಿಕೆಗೆ ಮುಂದಿನ ವಾರ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್‌ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಘೋಷಿಸಿದ್ದಾರೆ.

ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಟಿಆರ್‌ಎಸ್ ಮತ್ತು ಅಸಾದುದ್ದೀನ್ ಉವೈಸಿಯವರ ಎಐಎಂಐಎಂ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂಬ ಆರೋಪ ಮಾಡಿದರು. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಎಲ್ಲ ಪ್ರಯತ್ನಗಳನ್ನೂ ಬಿಜೆಪಿ ನಡೆಸುತ್ತಿದೆ.

"ಹೈದರಾಬಾದ್ ನಗರವನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬಹುದೇ ಎಂದು ಕೆಲವರು ನನ್ನ ಬಳಿ ಕೇಳುತ್ತಿದ್ದಾರೆ. ನಾನು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಫಿರೋಝಾಬಾದ್ ನಗರವನ್ನು ಅಯೋಧ್ಯೆ ಎಂದು ಮತ್ತು ಅಲಹಾಬಾದ್ ನಗರವನ್ನು ಪ್ರಯಾಗ್‌ರಾಜ್ ಎಂದು ನಾಮಕರಣ ಮಾಡಲಾಗಿದೆ. ಹಾಗಾದರೆ ಹೈದರಾಬಾದ್ ಏಕೆ ಭಾಗ್ಯನಗರವಾಗಬಾರದು" ಎಂದು ಆದಿತ್ಯನಾಥ್ ಬೆಂಬಲಿಗರಲ್ಲಿ ಪ್ರಶ್ನಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಮಾನ್ಯವಾಗಿ ಮೂಲಸೌಕರ್ಯ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ಈ ಬಾರಿ ಬಿಜೆಪಿ ತನ್ನ ಕಾರ್ಯತಂತ್ರವನ್ನು ಬದಲಿಸಿ, ಧಾರ್ಮಿಕ ಭಾವನೆ ಕೆರಳಿಸಿರುವುದು ಸ್ಪಷ್ಟವಾಗಿದೆ. ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಉವೈಸಿಯನ್ನು ಮುಹಮ್ಮದ್ ಅಲಿ ಜಿನ್ನಾ ಅವರ ಅವತಾರ ಎಂದು ಬಣ್ಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News