ನೂತನ ಕಾನೂನುಗಳು ರೈತರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿವೆ: ಪ್ರಧಾನಿ ಮೋದಿ

Update: 2020-11-29 17:14 GMT

ಹೊಸದಿಲ್ಲಿ, ನ.29: ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳು ರೈತರನ್ನು ಸಂಕೋಲೆಯಿಂದ ಮುಕ್ತಗೊಳಿಸುವ ಜೊತೆಗೆ ಅವರಿಗೆ ಹೊಸ ಹಕ್ಕು ಮತ್ತು ಅವಕಾಶಗಳನ್ನು ತೆರೆದಿಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ರವಿವಾರ ತಮ್ಮ ಮಾಸಿಕ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಮಾತನಾಡಿದ ಅವರು, ಈ ಹಿಂದೆ ಹಲವಾರು ರಾಜಕೀಯ ಪಕ್ಷಗಳು ಈಡೇರಿಸುವುದಾಗಿ ಭರವಸೆ ನೀಡಿದ್ದ , ದಶಕಗಳಿಂದ ನನೆಗುದಿಗೆ ಬಿದ್ದಿದ್ದ ರೈತರ ಬೇಡಿಕೆಗಳನ್ನು ಈಗ ಈಡೇರಿಸಲಾಗಿದೆ. ತೀವ್ರ ವಿಚಾರವಿಮರ್ಶೆಯ ಬಳಿಕ ಸಂಸತ್ತಿನಲ್ಲಿ ಈ ಕಾಯ್ದೆಗಳಿಗೆ ಅನುಮೋದನೆ ದೊರಕಿದೆ. ರೈತರಿಗೆ ಹೊಸ ಹಕ್ಕು ಮತ್ತು ಅವಕಾಶ ಲಭ್ಯವಾಗಲಿದ್ದು ರೈತರ ಸಮಸ್ಯೆಗಳು ತ್ವರಿತವಾಗಿ ಅಂತ್ಯವಾಗಲಿದೆ ಎಂದು ಹೇಳಿದರು.

ತಮ್ಮ ಸರಕಾರ ಕಠಿಣ ಪರಿಶ್ರಮಿಗಳಾದ ಭಾರತೀಯ ರೈತರ ಹಿತಚಿಂತನೆ ಮತ್ತು ಕ್ಷೇಮಾಭ್ಯುದಯಕ್ಕೆ ಬದ್ಧವಾಗಿದೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹೊಸ ಸ್ವರೂಪ ನೀಡಲಾಗಿದೆ ಎಂದ ಅವರು, ಮಹಾರಾಷ್ಟ್ರದ ಧುಲೆ ಪ್ರಾಂತ್ಯದ ರೈತ ಜಿತೇಂದ್ರ ಭೋಜಿಯ ಉದಾಹರಣೆ ನೀಡಿದರು. ಭೋಜಿಯಿಂದ ಮೆಕ್ಕೆಜೋಳ ಖರೀದಿಸಿದ್ದ ವ್ಯಾಪಾರಿಗಳು ಹಲವು ತಿಂಗಳು ಹಣ ನೀಡಿಲ್ಲ. ಬಹುಷಃ ಈ ವ್ಯಾಪಾರಿಗಳು ಹಳೆಯ ಕಾನೂನನ್ನು ಅನುಸರಿಸಿರಬೇಕು. ಆದರೆ ಹೊಸ ಕಾನೂನಿನಲ್ಲಿ ಇದಕ್ಕೆಲ್ಲಾ ಅವಕಾಶವೇ ಇರುವುದಿಲ್ಲ. ಇಲ್ಲಿ ರೈತರಿಗೆ ಹೆಚ್ಚಿನ ಹಕ್ಕು ಮತ್ತು ಅವಕಾಶವಿರುತ್ತದೆ . ಸೆಪ್ಟೆಂಬರ್‌ನಲ್ಲಿ ಅಂಗೀಕಾರಗೊಂಡ ಹೊಸ ಕಾನೂನಿನ ಪ್ರಕಾರ, ಕೃಷಿ ಉತ್ಪನ್ನಗಳನ್ನು ಖರೀದಿಸಿದ 3 ದಿನದೊಳಗೆ ಹಣ ಪಾವತಿಸಬೇಕು. ಹಣ ಸಿಗದಿದ್ದರೆ ರೈತರು ದೂರು ನೀಡಬಹುದು. ಆದ್ದರಿಂದ ಗಾಳಿ ಸುದ್ಧಿಗಳಿಗೆ ಕಿವಿಗೊಡದೆ ಕಾನೂನಿನ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News