ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದ ಹೊರಟ್ಟಿ: ಖಾಸಗಿ ಶಿಕ್ಷಕರಿಗೆ ಶೇ.50 ವೇತನ ನೀಡುವ ಪ್ರಸ್ತಾಪ

Update: 2020-11-29 11:55 GMT

ಭಟ್ಕಳ : ಕೊರೋನ ಸೋಂಕಿನಿಂದಾಗಿ ರಾಜ್ಯದ ಖಾಸಗಿ ಶಾಲೆಗಳಲ್ಲಿನ ಶಿಕ್ಷಕರಿಗೆ ವೇತನ ದೊರೆಯುತ್ತಿಲ್ಲ, ಸರ್ಕಾರ ಕನಿಷ್ಠ ಶೇ.50 ರಷ್ಟು ವೇತನ ನೀಡುವಂತೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಪಶ್ಚಿಮ ಶಿಕ್ಷಕ ಮತದಾರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಭರವಸೆ ನೀಡಿದರು.

ಅವರು ರವಿವಾರ ಭಟ್ಕಳದ ಲಲಿತಾ ಶಾನುಭಾಗ ಸಭಾಮಂಟಪದಲ್ಲಿ ಭಟ್ಕಳ ತಾಲೂಕು ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

ಅನುದಾನಿತ ಶಿಕ್ಷಕರ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅವುಗಳನ್ನು ಬಗೆಹರಿಸಿದ್ದು ಇನ್ನೂ ಹಲವು ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುವೆ. ಈಗ ಅನುದಾನರಹಿತ ಶಾಲಾ ಶಿಕ್ಷಕರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದು ಸರ್ಕಾರ ಇದನ್ನು ಬಗೆಹರಿಸುವಂತೆ ಹೋರಾಟ ಮಾಡುವೆ ಎಂದ ಅವರು, ಶಿಕ್ಷಕರು ಸಂಘಟನೆಯ ಮೂಲಕ ಹೋರಾಟವನ್ನು ಬೆಂಬಲಿಸಬೇಕು. ಡಿ.5ರಿಂದ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ಉಪವಾಸ ಸತ್ಯಗ್ರಹ ನಡೆಸಲು ಯೋಜಿಸಿದ್ದು ಈ ಹೋರಾಟದಲ್ಲಿ ಶಿಕ್ಷಕರು ಪಾಲ್ಗೊಳ್ಳಬೇಕು ಎಂದರು.

ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ್, ಮಾಧ್ಯಮಿಕ ಪ್ರೌಢಶಾಲಾ ಶಿಕ್ಷಕರ ಸಂಘದ ಮುಖಂಡರಾದಎಂ.ಟಿ.ಗೌಡ, ಎಲ್.ಎಂ.ಹೆಗಡೆ ಮಾತನಾಡಿದರು.

ಭಟ್ಕಳ ತಾಲೂಕು ಸಹ ಶಿಕ್ಷಕರ ಸಂಘದಅಧ್ಯಕ್ಷ ಶ್ರೀಧರ್ ಜಂಬೂರಮಠ, ಮಾಧ್ಯಮಿಕ ಪ್ರೌಢಶಾಲಾ ಸಂಘದ ಅಧ್ಯಕ್ಷ ಶಬ್ಬಿರ್‍ ಆಹಮದ್‍ ಫೇದಾರ್ ಉಪಸ್ಥಿತರಿದ್ದರು.

ನ್ಯೂಇಂಗ್ಲಿಷ್ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಶಿರೂರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮತನಾಡಿದರು, ಸಂಘದ ಮಾಜಿ ಅಧ್ಯಕ್ಷ ಕೆ.ಬಿ.ಮಡಿವಾಳ ವಂದಿಸಿದರು.

ಕಣ್ಣೀರಿಟ್ಟ ಖಾಸಗಿ ಶಿಕ್ಷಕರು

ಕಳೆದ 9 ತಿಂಗಳಿಂದ ಅರ್ದ ವೇತನ ಪಡೆದು ಕುಟುಂಬ ಸಾಗಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರ ಬದುಕು ಅತ್ಯಂತ ಕಷ್ಟದಲ್ಲಿದೆ, ಕೆಲ ಶಾಲೆಗಳಲ್ಲಿ ಇದುವರೆಗೂ ಯಾವುದೇ ವೇತನ ನೀಡುತ್ತಿಲ್ಲ, ಶಿಕ್ಷಕರ ಕುಟುಂಬ ಬೀದಿಗೆ ಬಂದಿದೆ ಎಂದು ಕಣ್ಣೀರಿಟ್ಟಿರುವ ತಾಲೂಕಿನ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರು ತಮ್ಮ ಕೂಗನ್ನು ಸದಸನದ ಮುಂದಿಟ್ಟು ಶಿಕ್ಷಕರ ಕುಟುಂಬವನ್ನು ರಕ್ಷಿಸುವಂತೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯಲ್ಲಿ ಮನವಿ ಮಾಡಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News